ಗರ್ಭಿಣಿ ಮಹಿಳಾ ಪೊಲೀಸ್ ಪೇದೆಗೆ ಶೀಮಂತ ಕಾರ್ಯ

ಹನೂರು, ನ.14: ಗರ್ಭಿಣಿ ಮಹಿಳಾ ಪೊಲೀಸ್ ಪೇದೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಹಿಳಾ ಪೊಲೀಸ್ ಪೇದೆಯನ್ನು ಬೀಳ್ಕೊಡುಗೆ ಮಾಡುವ ಬದಲು ಹಿಂದು ಧರ್ಮದ ಸಂಪ್ರದಾಯದಂತೆ ಶೀಮಂತ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇಂತಹದೊಂದು ವಿಶೇಷ ಕಾರ್ಯಕ್ರಮಕ್ಕೆ ನಾಂದಿ ಹಾಡಿರುವವರು ಹನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.
ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪವಿತ್ರ ಅವರನ್ನು ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಠಾಣೆಗೆ ವರ್ಗಾವಣೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಮಾಡುವ ಬದಲು ಶೀಮಂತ ಕಾರ್ಯವನ್ನು ಮಾಡುವ ಮೂಲಕ ಮಹಿಳಾ ಪೊಲೀಸ್ ಪೇದೆಗೆ ಗೌರವ ಸೂಚಿರುವುದು ಮಹಿಳಾ ಪೊಲೀಸ್ ಪೇದೆಯ ಸಂತಸದ ಜೊತೆಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಶೀಮಂತ ಕಾರ್ಯವನ್ನು ಇನ್ಸ್‍ಪೆಕ್ಟರ್ ರವಿನಾಯಕ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್‍ಪೆಕ್ಟರ್ ನಾಗೇಶ್ ನೇತೃತ್ವದಲ್ಲಿ ನಡೆಸಲಾಗಿದ್ದು, ಕಾರ್ಯಕ್ರಮವನ್ನು ಠಾಣಾ ಬರಹಗಾರ ಹೆಚ್.ಸಿ.ಗೋಪಾಲ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.