ಗರ್ಭಿಣಿ, ಬಾಣಂತಿಯರಲ್ಲಿನ ರಕ್ತ ಹೀನತೆ ತಡೆಯಲು ಪೋಷಣಾ ಅಭಿಯಾನ ಜರೂರಿ: ಸಿ.ಇ.ಓ

ಬೀದರ.ಮಾ.23: ತಾಲೂಕಿನ ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯಡಿ ಪೋಷಣ ಪಕ್ವಾಡ್ ಕಾರ್ಯಕ್ರಮವನ್ನು ಜಿಲ್ಲಾ ಬಾಲಭವನದಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಿಇಓ ಅವರು, ಪೋಷಣ ಅಭಿಯಾನವು ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಕ್ಕಳ ಅಪೌಷ್ಠಿಕಮಟ್ಟ ಹಾಗೂ ಗರ್ಭಿಣಿ ಮತ್ತು ಬಾಣಂತಿಯಲ್ಲಿರುವ ರಕ್ತಹೀನತೆಯನ್ನು ತಡೆಯಲು ಅಂಗÀನವಾಡಿ ಕಾರ್ಯಕರ್ತೆಯರ ಪಾತ್ರ ಅತಿ ಮುಖ್ಯವಾಗಿದೆ. ಮೊಳಕೆ ಬರಿಸಿದ ಕಾಳು, ಹಸಿಸೊಪ್ಪು, ತರಕಾರಿಗಳು, ಮೊಟ್ಟೆ ಹಾಗೂ ಹಣ್ಣುಗಳನ್ನು ಬಳಸುವುದರಿಂದ ಮಕ್ಕಳ ಆರೋಗ್ಯ ಹಾಗೂ ಗರ್ಭಿಣಿ ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ ಎಂದು ತಿಳಿಸಿದರು. ಅದರಂತೆ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬಿಸಿ ಊಟ ನೀಡಬೇಕೆಂದು ತಿಳಿಸಿದರು. ಕಡ್ಡಾಯವಾಗಿ ಎಲ್ಲರು ಮಾಸ್ಕ ಧರಿಸಿ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ ಪಿ ಸಿರಸಗಿ ಅವರು ಮಾತನಾಡಿ, ಶಿಶು ಮರಣ, ತಾಯಂದಿರ ಮರಣ, ಅಪೌಷ್ಠಿಕ ಮಕ್ಕಳ ಜನನ, ರಕ್ತಹೀನತೆ ಮುಂತಾದ ಸಮಸ್ಯಗಳಿಗೆ ಪರಿಹಾರ ಸಿಗಬೇಕಾದರೆ ಉತ್ತಮ ಪೌಷ್ಠಿಕಯುಕ್ತ ಆಹಾರ ಸೇವನೆ ಅವಶ್ಯಕವಾಗಿದೆ. ಪ್ರತಿ ತಿಂಗಳು ಮೊದಲನೇ ಶುಕ್ರವಾರ ಹಾಗೂ ಮೂರನೆ ಶುಕ್ರವಾರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ 06 ತಿಂಗಳ ಮಗುವಿಗೆ ಅನ್ನಪ್ರಾಶನ್ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಂಜತ್ರಿ ಅವರು ಮಾತನಾಡಿ, ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆಯನ್ನು ತಡೆಗಟ್ಟುವುದು, ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸುವುದು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸುವುದು ಮತ್ತು ಚಿಕ್ಕ ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆ ಕಡಿಮೆಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಆದ್ದರಿಂದ ಎಲ್ಲರು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ, ಪೆÇೀಷಣ ಅಭಿಯಾನದ ಜಿಲ್ಲಾ ಸಂಯೋಜಕರಾದ ಅನಿತಾ ಚಿಮಕೋಡೆ, ಜಿಲ್ಲಾ ಸಹಾಯಕ ಸಂಯೋಜಕರಾದ ಪ್ರಿಯಾಂಕ, ತಾಲೂಕ ಸಂಯೋಜಕರಾದ ವಿಜಯಲಕ್ಷ್ಮಿ, ತಾಲೂಕ ಸಹಾಯಕ ಸಂಯೋಜಕರಾದ ಭಾಗ್ಯವತಿ, ಬೀದರ ತಾಲೂಕಿನ ಎಲ್ಲಾ ಮೇಲ್ವಿಚಾರಕಿಯರು ಮತ್ತು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.