ಗರ್ಭಿಣಿಯರಿಗೂ ಸೋಂಕು : ಹೆಚ್ಚಿದ ಆತಂಕ

cute cartoon vector illustration

ಬೆಂಗಳೂರು, ಏ.೨೫-ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಲೆಯ ಕೋವಿಡ್ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗರ್ಭಿಣಿಯರು ಈ ಮಹಾಮಾರಿಗೆ ತುತ್ತಾಗುತ್ತಿರುವುದು ಮತ್ತಷ್ಟು ಆತಂಕ ತಂದಿದೆ.
ಕೊರೊನಾ ಎರಡನೇ ಅಲೆ ಆರಂಭದಿಂದ ೧೬ ಗರ್ಭಿಣಿಯರಿಗೆ ಕೋವಿಡ್ ಸೋಂಕು ತಗುಲಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರು ತೀವ್ರ ಸೋಂಕಿನಿಂದ ಬಳಲುತ್ತಿಲ್ಲ. ಆದರೆ ಯಾವುದೇ ರೀತಿಯ ಕಷ್ಟಕರ ಪರಿಸ್ಥಿತಿ ನಿರ್ಮಾಣ ಆಗಬಹುದು ಎನ್ನುತ್ತಾರೆ ವೈದ್ಯರು.
ಕೊರೊನಾ ಬಂದಾಗಿನಿಂದ ಹೆರಿಗೆಗೆ ಖಾಸಗಿ ಆಸ್ಪತ್ರೆಗಳನ್ನು ನೆಚ್ಚಿಕೊಳ್ಳುವುದು ಕಡಿಮೆಯಾಗಿದೆ. ಕಳೆದ ವಾರ್ಷಿಕ ಸಾಲಿನಲ್ಲಿ ಸುಮಾರು ೧೪,೫೦೦ ಮಹಿಳೆಯರ ಹೆರಿಗೆ ಪಾಲಿಕೆ ಆಸ್ಪತ್ರೆಯಲ್ಲಿ ನಡೆದಿದೆ. ಸಾಮಾನ್ಯವಾಗಿ ೮ ಸಾವಿರ ಹೆರಿಗೆಗಳು ವಾರ್ಷಿಕವಾಗಿ ಪಾಲಿಕೆ ಆಸ್ಪತ್ರೆಯಲ್ಲಿ ನಡೆಯುತ್ತಿತ್ತು. ಆದರೆ ಕೊರೊನಾ ಬಂದಾಗಿನಿಂದ ಅದರ ಸಂಖ್ಯೆ ೧೪,೫೦೦ಕ್ಕೆ ಏರಿಕೆಯಾಗಿದೆ.
ಈ ಅವಧಿಯಲ್ಲೂ ಹೆಚ್ಚೆಚ್ಚು ಗರ್ಭಿಣಿಯರು ಪಾಲಿಕೆಯನ್ನು ಸಂಪರ್ಕಿಸುತ್ತಿದ್ದಾರೆ. ಇನ್ನು, ಉತ್ತಮ ರೀತಿಯಲ್ಲಿ ಶುಶ್ರೂಷೆ ತಾಯಿ ಮತ್ತು ಮಗುವಿಗೆ ಸಿಗಲಿ ಎಂಬ ಕಾರಣಕ್ಕೆ ಹೆರಿಗೆಯಾಗುವ ೧೫ ದಿನಗಳ ಮುಂಚಿತವಾಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ.
ವಿಶೇಷ ವ್ಯವಸ್ಥೆ:
ಕೊರೊನಾ ಎರಡನೇ ಅಲೆ ಜನರನ್ನು ಕಂಗೆಡಿಸಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆಯೇ ಹೊರತು ಇಳಿಕೆಯಾಗುತ್ತಿಲ್ಲ. ಮೊದಲ ಅವಧಿಯಲ್ಲಿ ಕೊರೊನಾ ರಣಕೇಕೆ ಹಾಕಿದಾಗಲೂ ಬಹಳ ಸಮಸ್ಯೆ ಎದುರಿಸುವವರ ಪೈಕಿ ಗರ್ಭಿಣಿಯರೂ ಇದ್ದರು. ಆದರೆ ಈ ಬಾರಿ ಹಿಂದಿನ ಪರಿಸ್ಥಿತಿ
ಆಗದಿರಲಿ ಎಂದು ಬಿಬಿಎಂಪಿ ನಗರದಲ್ಲಿನ ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದು, ಕೆಲ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಿದೆ.
ಸದ್ಯ ನಗರದ ಘೋಷಾ ಆಸ್ಪತ್ರೆ ಸೇರಿದಂತೆ, ನಗರದ ೪೬ ರೆಫರಲ್ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗರ್ಭಿಣಿ ಮಹಿಳೆಯರ ಮೇಲೆ ಯಾವುದೇ ಪರಿಣಾಮ ಬೀರದಂತೆ ಗಮನಹರಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.