ಗರ್ಭಪಾತ ಹಕ್ಕುಗಳ ಹೊಸ ಆದೇಶಕ್ಕೆ ಸಹಿ

ನ್ಯೂಯಾರ್ಕ್, ಆ.೪- ಗರ್ಭಪಾತಕ್ಕೆ ಸಂಬಂಧಿಸಿದ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಿದ ಅಮೆರಿಕಾದ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಪ್ರತಿಯಾಗಿ ಇದೀಗ ಅಧ್ಯಕ್ಷ ಜೋ ಬೈಡೆನ್ ಅವರು ಇದೀಗ ಗರ್ಭಪಾತ ಹಕ್ಕುಗಳ ಹೊಸ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ.
ಫೆಡರಲ್ ಸರ್ಕಾರದಾದ್ಯಂತ ಅನೇಕ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ, ಅಲ್ಲದೆ ಇತ್ತೀಚೆಗೆ ಸ್ಥಾಪಿಸಲಾದ ಟಾಸ್ಕ್ ಫೋರ್ಸ್‌ನ ಉದ್ಘಾಟನಾ ಸಭೆಯಲ್ಲಿ ಬಿಡೆನ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಸಂತಾನೋತ್ಪತ್ತಿ ಹಕ್ಕುಗಳನ್ನು ರಕ್ಷಿಸಲು ತಮ್ಮ ಸಂಸ್ಥೆಗಳು ತೆಗೆದುಕೊಂಡ ಕ್ರಮಗಳ ಕುರಿತು ಸಂಪುಟ ಸದಸ್ಯರು ಅಧ್ಯಕ್ಷರಿಗೆ ವಿವರಿಸಿದರು. ಗರ್ಭಪಾತ ಹಕ್ಕುಗಳ ಹೊಸ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಬೈಡೆನ್, ಹೊಸ ನಿಯಮವು ಗರ್ಭಪಾತ ಹೊಂದಲು ಬಯಸುವ ಮಹಿಳೆಯರು ರಾಜ್ಯದಿಂದ ಹೊರಗೆ ತೆರಳಲು ನೆರವು ನೀಡಲಿದ್ದು, ಅಲ್ಲದೆ ಫೆಡರಲ್ ಕಾನೂನಿನಿಂದ ರಕ್ಷಣೆ ನೀಡಲಿದೆ. ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಇದು ಮಹಿಳೆಯರಿಗೆ ಅನುಕೂಲ ಒದಗಿಸಲಿದೆ. ಮಹಿಳೆಯರು ಆರೋಗ್ಯ ಹಾಗೂ ಜೀವ ನಮಗೆ ಬಹುಮುಖ್ಯವಾಗಿದೆ. ಗರ್ಭಪಾತ ಹೊಂದಿದ ಮಹಿಳೆಗೆ ವೈದ್ಯಕೀಯ ನೆರವನ್ನು ತುರ್ತು ವೈದ್ಯಕೀಯ ನೆರವನ್ನು ನಿರಾಕರಿಸಲಾಗುತ್ತಿದೆ. ವೈದ್ಯರು ಕೂಡ ಸಂತ್ರಸ್ಥ ಮಹಿಳೆಯಗೆ ಏನು ಒದಗಿಸಬಹುದು ಎಂಬುದರ ಬಗ್ಗೆ ಅನಿಶ್ಚಿತತೆ ಹೊಂದಿರುತ್ತಾರೆ. ಅಲ್ಲದೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಕೂಡ ಮತ್ತೊಂದು ರಾಜ್ಯಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಇತ್ತು ಎಂದು ಬೈಡೆನ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಕನ್ಸಾಸ್ (ಅಮೆರಿಕಾದ ರಾಜ್ಯ)ನಲ್ಲಿ ಮತದಾರರು ಗರ್ಭಪಾತದ ಹಕ್ಕುಗಳನ್ನು ಪ್ರತಿಪಾದಿಸಿದ್ದು, ಬೈಡೆನ್ ಸರ್ಕಾರಕ್ಕೆ ಹೆಚ್ಚಿನ ಹುರುಪು ನೀಡಿತ್ತು. ಇದು ಕನ್ಸಾಸ್‌ನಲ್ಲಿ ಜಿಒಪಿ ನೇತೃತ್ವದ ಶಾಸಕಾಂಗವು ಗರ್ಭಪಾತಕ್ಕೆ ಸಂಬಂಧಿಸಿದ ಹೊಸ ನಿರ್ಬಂಧಗಳನ್ನು ವಿಧಿಸುವುದನ್ನು ತಡೆಹಿಡಿಯಲಿದೆ. ಇದರ ಬಗ್ಗೆ ಕೂಡ ಪ್ರಸ್ತಾಪಿಸಿದ ಬೈಡೆನ್, ಮಹಿಳೆಯರ ಮೂಲಭೂತ ಹಕ್ಕುಗಳಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು ಎಂಬುದನ್ನು ಇದು ನಿರೂಪಿಸಿದೆ. ಈ ವಿಚಾರದಲ್ಲಿ ಕನ್ಸಾಸ್ ಮತದಾರರು ರಾಜಕಾರಣಿಗಳಿಗೆ ಪ್ರಬಲ ಸಂಕೇತವನ್ನೇ ನೀಡಿದ್ದು, ನಮ್ಮ ಸರ್ಕಾರಕ್ಕೆ ಅವರ ಬೆಂಬಲವಿದೆ ಎಂದು ತಿಳಿಸಿದ್ದಾರೆ.