ಗರುಡ ಪುರಾಣ ಚಲನಚಿತ್ರ ನ. 3ರಂದು ಬಿಡುಗಡೆ

ಕಲಬುರಗಿ,ಅ.28:ತಾವೇ ನಾಯಕ ನಟನಾಗಿರುವ ಹಾಗೂ ನಿರ್ದೇಶನವನ್ನು ಮಾಡಿರುವ ಗರುಡ ಪುರಾಣ ಕನ್ನಡ ಚಲನಚಿತ್ರವು ರಾಜ್ಯಾದ್ಯಂತ ನವೆಂಬರ್ 3ರಂದು ತೆರೆ ಕಾಣಲಿದೆ ಎಂದು ಸ್ಥಳೀಯ ಪ್ರತಿಭೆ ಮಂಜುನಾಥ್ ನಾಗ್ಬಾ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈಗಾಗಲೇ ಹದಿನೆಂಟು ಚಲನಚಿತ್ರಗಳಲ್ಲಿ ನಟಿಸಿರುವೆ. ಗರುಡ ಪುರಾಣ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ ಪ್ರಥಮ ಚಿತ್ರವಾಗಿದೆ ಎಂದರು.
ನಾನು ನಗರದ ಗಂಗಾನಗರದ ನಿವಾಸಿ. ದಿ. ಐಡಿಯಲ್ ಫೈನ್ ಆರ್ಟ್‍ನಲ್ಲಿ ವ್ಯಾಸಂಗ ಮಾಡಿರುವೆ. ನಂತರ ಬೆಂಗಳೂರಿಗೆ ತೆರಳಿ ಚಲನಚಿತ್ರ ರಂಗದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಅತ್ಯಂತ ಜನಪ್ರೀಯ ಕಾಂತಾರ ಚಲನಚಿತ್ರದಲ್ಲಿ ನಾನು ಆನ್‍ಲೈನ್ ಎಡಿಟಿಂಗ್ ಮಾಡಿರುವೆ. ಈಗ ಗರುಡ ಪುರಾಣ ಸ್ವತಳ ಕಥೆ ಮಾಡಿ, ಚಿತ್ರಕತೆ, ಸಂಕಲನ, ನಿರ್ದೇಶನ ಮತ್ತು ನಾಯಕ ನಟನಾಗಿಯೂ ಸಹ ಅಭಿನಯಿಸಿರುವೆ ಎಂದು ಅವರು ಹೇಳಿದರು.
ಚಲನಚಿತ್ರದಲ್ಲಿ ನಾಯಕ ನಟಿ ಮಂಗಳೂರು ಮೂಲದ ದಿಶಾ ಶೆಟ್ಟಿ, ಸಹ ಕಲಾವಿದರಾಗಿ ಸಂತೋಷ್ ಕರ್ಕಿ, ಭಜರಂಗಿ ಖ್ಯಾತಿಯ ಚೆಲುವರಾಜ್, ಕೆಂಪಣ್ಣ, ರಾಜಕುಮಾರ್, ಆಕಾಶ್ ವಾಗ್ಮೋರೆ ಅವರೂ ಸೇರಿ ಜಿಲ್ಲೆಯ ಏಳು ಜನ ಕಲಾವಿದರು ಅಭಿನಯಿಸಿದ್ದಾರೆ. ಎಲ್ಲರೂ ಹೊಸಬರು ಮಾಡಿರುವ ಚಲನಚಿತ್ರವಾಗಿದೆ. ಬೆಂಗಳೂರು ಸುತ್ತಮುತ್ತಲೂ ಚಿತ್ರೀಕರಣಗೊಂಡಿದ್ದು, ಹೊಸ ಚಿತ್ರಗಳನ್ನು ಪ್ರೇಕ್ಷಕರು ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು. ಎರಡನೇ ಬಾರಿ ನೋಡುವುದಕ್ಕಿಂತ ಮೊದಲ ಬಾರಿಗೆ ಚಿತ್ರ ವೀಕ್ಷಣೆ ಮಾಡಿದರೆ ಹೊಸ ಕಲಾವಿದರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಸಹ ನಿರ್ದೇಶಕ ಬಿ.ಎನ್. ಯೋಗೇಶಕುಮಾರ್ ಅವರು ಮಾತನಾಡಿ, ಚಲನಚಿತ್ರದಲ್ಲಿ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡಿರುವೆ. ನಮ್ಮ ಕೈಲಾದಷ್ಟು ಬಜೆಟ್ ಹಾಕಿದ್ದೀವಿ. ಬಹಳ ಚೆನ್ನಾಗಿದೆ. ಫೈನ್ ಆರ್ಟ್‍ನಲ್ಲಿ, ಬಡ ಕುಟುಂಬದಿಂದ ಬಂದ ಮಂಜುನಾಥ್ ಅವರು ಕಲಬುರ್ಗಿಯವರು. ಈಗಾಗಲೇ 18 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂರು ಪ್ರತಿಭೆಗಳು ಒಬ್ಬರಲ್ಲಿಯೇ ಇವೆ. ಹೀಗಾಗಿ ಬಜೆಟ್ ನಮಗೆ ಕಡಿಮೆಯಾಗಿದೆ. ಚಿತ್ರದ ಕಥೆ ಬೇಸರ ಆಗುವುದಿಲ್ಲ. ಕುತೂಹಲ ಹುಟ್ಟಿಸಿದೆ. ಮಹಿಳೆಯರ ಸುರಕ್ಷತೆ ಸಂದೇಶವಿದೆ. ಎಲ್ಲರೂ ಚಲನಚಿತ್ರ ನೋಡಿ ಎಂದು ಮನವಿ ಮಾಡಿದರು.
ನಾಯಕಿ ನಟಿ ದಿಶಾ ಶೆಟ್ಟಿ ಅವರು ಮಾತನಾಡಿ, ನಾನು ಇದೇ ಪ್ರಥಮ ಬಾರಿಗೆ ಚಲನಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದ್ದೇನೆ. ಹೊಸ ಚಿತ್ರದಲ್ಲಿ ತುಂಬಾ ಒಳ್ಳೆಯ ಪಾತ್ರ ನನಗಿದೆ. ಚಲನಚಿತ್ರಮಂದಿರದಲ್ಲಿ ನೋಡಿ, ಬೆಂಬಲಿಸಿ. ನೀವು ಖಂಡಿತವಾಗಿಯೂ ಖುಷಿ ಪಡುತ್ತೀರಿ. ಚಲನಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ಅಭಿನಯಿಸಿರುವೆ. ಬ್ರಾಹ್ಮಣ ಕುಟುಂಬದ ಹುಡುಗಿ. ಪ್ರೇಮದ ಕುರಿತು ಕಥಾವಸ್ತು ಇದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅವಿನಾಶ್, ಶಿವಾನಂದ್ ಹೊನಗುಂಟಿ ಮುಂತಾದವರು ಉಪಸ್ಥಿತರಿದ್ದರು.