ಗರೀಬ್ ಕಲ್ಯಾಣ ಯೋಜನೆ : ಫಲಾನುಭವಿಗಳಿಗೆ ೫ ಕೆಜಿ ಅಕ್ಕಿ ವಿತರಣೆ

ಬಡವರ ಅನ್ನಕ್ಕೆ ಯಾರಾದರೂ ಅಡ್ಡಿಯಾದರೇ ಕಠಿಣ ಕ್ರಮ – ಶಾಸಕರ ಎಚ್ಚರಿಕೆ
ರಾಯಚೂರು.ಸೆ.೨೫- ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಪ್ರತಿ ಫಲಾನುಭವಿಗಳಿಗೂ ತಲುಪುವಂತಹ ವ್ಯವಸ್ಥೆಯಾಗಬೇಕು. ಬಡವರ ಅನ್ನಕ್ಕೆ ಯಾರಾದರೂ ಅಡ್ಡಿ ಬಂದರೇ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಎಚ್ಚರಿಕೆ ನೀಡಿದರು.
ವಾರ್ಡ್ ೨೫, ೩೦, ೩೧ ರಲ್ಲಿ ಆಯೋಜಿತ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ೫೦ ವರ್ಷಗಳ ಹಿಂದೆ ಸ್ವೈನ್‌ಫ್ಲೂ ಬಂದು ಅನೇಕರು ದೇಶದಲ್ಲಿ ಮರಣ ಹೊಂದಿದ್ದರು ಎನ್ನುವುದು ಇತಿಹಾಸ. ಅಂದು ರೋಗಕ್ಕಿಂತ ಹಸಿವಿನಿಂದ ಸತ್ತವರ ಸಂಖ್ಯೆಯೇ ಅಧಿಕವೆಂದು ಹೇಳಲಾಗುತ್ತದೆ. ಅಂದು ಆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾದ ಅಂದಿನ ಸರ್ಕಾರ ಜನರಿಗೆ ಅನ್ನ ಮುಟ್ಟಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೆ, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಮಧ್ಯೆ ಜನರಿಗೆ ಯಾವುದೇ ತೊಂದರೆಯಾಗದಂತೆ ಮನೆ ಮನೆಗೆ ಅನ್ನ ಯೋಜನೆ ಮೂಲಕ ಆಹಾರ ಪದಾರ್ಥ ತಲುಪಿಸುವ ಮೂಲಕ ಹಸಿವಿನಿಂದ ಯಾರು ಸಾಯಬಾರದೆಂಬ ಉದ್ದೇಶವನ್ನು ಅವರು ಪ್ರದರ್ಶಿಸಿದ್ದಾರೆ.
ಪ್ರತಿಯೊಬ್ಬ ಫಲಾನುಭವಿಗಳ ಮನೆಗೆ ೫ ಅಕ್ಕಿ ವಿತರಣೆಯಾಗುವಂತಹ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಗರೀಬ್ ಕಲ್ಯಾಣ ಅನ್ನ ಯೋಜನೆ ರೂಪಿಸಿದ್ದಾರೆ. ನಮ್ಮ ಜೀವಮಾನದಲ್ಲಿ ಈ ರೀತಿಯ ಕೊರೊನಾದಂತಹ ಮಹಾಮಾರಿಯನ್ನು ಕಂಡ ನೆನಪಿಲ್ಲ. ಲಾಕ್ ಡೌನ್‌ಗಳಿಂದ ಸರ್ಕಾರಕ್ಕೂ ಆದಾಯವಿಲ್ಲದ ಪರಿಸ್ಥಿತಿಯಲ್ಲಿ ಜನರಿಗೆ ಆಹಾರ ನೀಡುವಂತಹ ಯೋಜನೆಯನ್ನು ಪ್ರಧಾನಮಂತ್ರಿ ಹಮ್ಮಿಕೊಳ್ಳುವ ಮೂಲಕ ಜನರ ಹಸಿವನ್ನು ನೀಗಿಸಿದ್ದಾರೆ. ಜನ ತಮ್ಮ ಮನೆಗಳಲ್ಲಿ ತಾವು ಇರುವುದರಿಂದ ವ್ಯವಹಾರ ಸ್ಥಗಿತಗೊಂಡು ಸರ್ಕಾರಕ್ಕೆ ತೆರಿಗೆ ಸಂಗ್ರಹವೇ ಇಲ್ಲದಂತಹ ಪರಿಸ್ಥಿತಿಯಲ್ಲಿ ಸರ್ಕಾರ ಜನರಿಗೆ ಅನ್ನ ನೀಡುವ ಮೂಲಕ ಯಾವುದೇ ಸಮಸ್ಯೆಯಿಲ್ಲದಂತೆ ನೋಡಿಕೊಂಡಿದೆ.
ನೀವು ಬೇರೆ ದೇಶಗಳನ್ನು ಗಮನಿಸಿ. ಅಲ್ಲಿ ಜನ ಒಬ್ಬರಿಗೊಬ್ಬರು ಬಡದಾಡಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿಯಂತಹ ಬಲಿಷ್ಠ ನಾಯಕ ನಮ್ಮ ದೇಶಕ್ಕೆ ಪ್ರಧಾನಿಯಾಗದಿದ್ದರೇ, ನಮ್ಮ ದೇಶದ ಗತಿ ಏನಾಗುತ್ತಿತ್ತು?. ನರೇಂದ್ರ ಮೋದಿ ಅವರು ತಮ್ಮ ಅಧಿಕಾರದ ಕೊರೊನಾ ಈ ಎರಡು ವರ್ಷದಲ್ಲಿ ಜನರನ್ನು ಉಳಿಸಿದ್ದಾರೆ, ಜನರಿಗೆ ಅನ್ನ ಕೊಟ್ಟಿದ್ದಾರೆ, ಜನರಿಗೆ ಗ್ಯಾಸ್, ಮನೆ ಕೊಡುವ ಮೂಲಕ ಜನರ ಬೇಡಿಕೆ ಈಡೇರಿಸಿದ್ದಾರೆ. ಯಾವುದೇ ಬೇಧ, ಭಾವ, ಮೇಲು-ಕೀಳು ಎಂಬ ಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ಕಾಣುವ ವ್ಯವಸ್ಥೆ ನಮ್ಮಲ್ಲಿದೆ.
ವಾರ್ಡ್‌ಗಳಲ್ಲಿ ಎಲ್ಲಾ ರಸ್ತೆಗಳು ಪೂರ್ಣಗೊಂಡಿವೆ. ಇನ್ನೂ ಏನಾದರೂ ಸಣ್ಣ ಪುಟ್ಟ ಕೆಲಸಗಳಿದ್ದರೇ, ನಾನು ಕೈಗೊಳ್ಳುವ ಮೂಲಕ ಜನರಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಜನರಿಗೆ ಯಾವುದಾದರೂ ಸಹಾಯ, ಸಹಕಾರ ಬೇಕಾದರೇ ನಮ್ಮ ಕಾರ್ಯಕರ್ತರನ್ನು ಸಂಪರ್ಕಿಸಿದರೇ, ಅವರೆಲ್ಲರಿಗೂ ನೆರವು ನೀಡಲಾಗುತ್ತದೆ. ಪ್ರತಿ ಮನೆಗೂ ಕುಡಿವ ನೀರಿನ ಸೌಲಭ್ಯ ಒದಗಿಸಲಾಗಿದೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರೊಂದಿಗೆ ಫಲಾನುಭವಿಗಳಿಗೆ ಗರೀಬ್ ಕಲ್ಯಾಣ ಯೋಜನೆಯ ೫ ಕೆಜಿ ಅಕ್ಕಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹೇಂದ್ರ ರೆಡ್ಡಿ, ಎಸ್.ಜನಾರ್ಧನ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.