ಗರಿಗೆದರಿದ ಹಳ್ಳಿ ರಾಜಕೀಯ

ಬೆಂಗಳೂರು, ನ. ೧೪. ಬಹುನಿರೀಕ್ಷಿತ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಇನ್ನು ಮೂರು ವಾರದೊಳಗೆ ದಿನಾಂಕ ಪ್ರಕಟಿಸುವಂತೆ ಹೈಕೋರ್ಟ್ , ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿರುವ ಬೆನ್ನಲ್ಲೇ ಮುಂದಿನ ವಿಧಾನಸಭಾ ಚುನಾವಣೆಗೆ ಭದ್ರ ರಾಜಕೀಯ ಬುನಾದಿ ಹಾಕುವಂತಹ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ’ಹಳ್ಳಿ ರಾಜಕೀಯ ’ ಗರಿಗೆದರುವಂತೆ ಆಗಿದೆ.

ರಾಜ್ಯದಲ್ಲಿನ ೬೦೦೦ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಾಗಿದ್ದು , ಉದಯೋನ್ಮುಖ ರಾಜಕಾರಣಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮೊದಲ ಹೆಜ್ಜೆಯಾಗಲಿದೆ.

ಯಾವುದೇ ಪಕ್ಷದ ಚಿಹ್ನೆಯ ಮೇಲೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯೋದಿಲ್ಲ ವಾದರೂ, ರಾಜಕೀಯ ಪಕ್ಷಗಳ ಕೃಪಾಕಟಾಕ್ಷ ವಿಲ್ಲದೆ ಯಾವುದೇ ವ್ಯಕ್ತಿ ಗ್ರಾಮೀಣ ರಾಜಕೀಯ ವೇದಿಕೆ ಏರಲು ಸಾಧ್ಯವಾಗುವುದಿಲ್ಲ.

ಆದರೆ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸ್ಥಳೀಯ ಮಟ್ಟದಲ್ಲಿ ತಮ್ಮ ಅನುಯಾಯಿಗಳಿಗೆ ಟಿಕೆಟ್ ನೀಡಿ ಸ್ಥಳೀಯ ಪಂಚಾಯಿತಿಗಳಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಚಿಂತನೆ ನಡೆಸಿದ್ದು ಆ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುಲಭವಾಗಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಈಗಿನಿಂದಲೇ ರಾಜಕೀಯ ಲೆಕ್ಕಾಚಾರಗಳನ್ನು ಹಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಮುಂದಿನ ಮೂರು ತಿಂಗಳಲ್ಲಿ ಗ್ರಾಮಪಂಚಾಯತಿಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿರವುದು
ರಾಜಕೀಯ ಪಕ್ಷಗಳ ಮುಖಂಡರಲ್ಲಿ ಹೊಸ ಚಿಂತನೆಗಳು ಗರಿಗೆದರುವಂತೆ ಮಾಡಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಭದ್ರ ಬುನಾದಿಯನ್ನು ಹಾಕಿ ಕೊಡುವಂತಹ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಈಗಾಗಲೇ ಲಕ್ಷಾಂತರ ಆಕಾಂಕ್ಷಿಗಳು ಸ್ಥಳೀಯ ಮಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಎಲ್ಲ ಪಕ್ಷಗಳ ನಾಯಕರ ಅನುಯಾಯಿಗಳು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮೆಟ್ಟಿಲಾಗಿ ಬಳಸಿಕೊಂಡು ರಾಜಕೀಯ ರಂಗದಲ್ಲಿ ಮೇಲೆ ಬರುವ ಕನಸನ್ನು ಕಾಣುತ್ತಿದ್ದಾರೆ. ಅವರ ಕನಸಿಗೆ ಹೈಕೋರ್ಟ್ ನೀಡಿರುವ ನಿರ್ದೇಶನ ಹೊಸ ಆಯಾಮವನ್ನು ನೀಡಿದೆ ಎಂದರೆ ತಪ್ಪಾಗಲಾರದು.

ಗ್ರಾಮ ಪಂಚಾಯಿತಿ ಗಳ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು ಈಗಾಗಲೇ ತಿಂಗಳುಗಳೇ ಕಳೆದಿವೆ. ಚುನಾವಣೆ ನಡೆಸಲು ಹಿಂದು ಮುಂದು ನೋಡುತ್ತಿರುವ ರಾಜ್ಯ ಸರ್ಕಾರ ಚುನಾವಣೆಗಳನ್ನು ಮುಂದೂಡಿ ಆಡಳಿತಾಧಿಕಾರಿಗಳನ್ನು ನೇಮಿಸುವ ಚಿಂತನೆ ಮಾಡಿದ್ದು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಕೆರಳಿಸಿತ್ತು.

ಯಾವುದೇ ಕಾರಣಕ್ಕೂ ಚುನಾವಣೆಯನ್ನು ಮುಂದೂಡಬಾರದು ಸಕಾಲಕ್ಕೆ ಚುನಾವಣೆಯನ್ನು ಘೋಷಣೆ ಮಾಡಿ ಸ್ಥಳೀಯ ಮಠದಲ್ಲಿ ಹೊಸ ಚುನಾಯಿತ ಪ್ರತಿನಿಧಿಗಳು ಆಡಳಿತ ನಡೆಸುವಂತಾಗಬೇಕು ಎಂದು ಈ ಪಕ್ಷಗಳ ನಾಯಕರು ಹಲವು ಬಾರಿ ಒತ್ತಾಯಿಸಿದ್ದಾರೆ.

ಗ್ರಾಮಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದಿರುವುದರಿಂದ ಸ್ಥಳೀಯ ಶಾಸಕರು , ಪಿಡಿಓಗಳ ಮೂಲಕ ಪಂಚಾಯಿತಿಗಳ ಆಡಳಿತವನ್ನು ನಿರ್ವಹಣೆ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಅಧಿಕಾರಿಗಳ ಕೈಯಲ್ಲಿ ಗ್ರಾಮ ಪಂಚಾಯಿತಿಗಳ ಆಡಳಿತ ಸಿಲುಕಿ ಗ್ರಾಮೀಣ ಜನರ ಆಶೋತ್ತರಗಳಿಗೆ ನೀರು ಬಿಟ್ಟಂತಾಗಿದೆ.

ಸ್ಥಳೀಯ ಶಾಸಕರು ಅಧಿಕಾರಿಗಳನ್ನು ಬಳಸಿಕೊಂಡು ಅವರ ಅವರ ಅನುಯಾಯಿಗಳಿಗೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಹಾದಿ ಸುಗಮವಾದಂತಾಗಿದೆ. ಸ್ಥಳೀಯ ಪಂಚಾಯಿತಿಗಳಲ್ಲಿ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿ ಬಂದಲ್ಲಿ ಗ್ರಾಮೀಣ ಜನರ ಬೇಕು ಬೇಡಗಳನ್ನು ಗ್ರಾಮಸಭೆಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಅವಕಾಶ ಇರುತ್ತದೆ.