ಗರಗ ನಾಗಲಾಪುರ ಗ್ರಾಮದಲ್ಲಿ ಆರೋಗ್ಯ ಅಧಿಕಾರಿಗಳ ಠಿಕಾಣಿ : ವಾಂತಿ ಬೇಧಿ ಹತೋಟಿಗೆ

ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.11: ಕಳೆದ ಹದಿನೈದು ದಿನಗಳಿಂದ ಗರಗ ನಾಗಲಾಪುರ ಗ್ರಾಮದಲ್ಲಿ ಸುಮಾರು 13 ವಾಂತಿ ಬೇಧಿ ಪ್ರಕರಣಗಳು ಕಂಡು ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯಿಂದ ಅಗತ್ಯ ಚಿಕಿತ್ಸೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ತಿಳಿಸಿದರು.
ಅವರು ಸಮೀಪದ ಗರಗ ನಾಗಲಾಪುರ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣಗಳು ಉಲ್ಬಣಿಸಿದ ಹಿನ್ನಲೆಯಲ್ಲಿ  ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.
ಆಗಸ್ಟ್ 16 ರಿಂದ ಗ್ರಾಮದ ಜನರಲ್ಲಿ ಕೆಲವರಿಗೆ ವಾಂತಿ ಬೇಧಿ ಕಂಡುಬಂದಿದ್ದು, ಅವರುಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಮ್ಮ ಇಲಾಖೆಯ ಸಿಬ್ಬಂದಿಗಳು ಮನೆ ಮನೆ ಸಮೀಕ್ಷೆ ಮಾಡಿ, ಗ್ರಾಮದಲ್ಲಿಯೇ ಆರೋಗ್ಯ ಕ್ಯಾಂಪ್ ಆರಂಭಿಸಿ ಠಿಕಾಣಿ ಹೂಡಿದ್ದಾರೆ. ಯಾವುದೇ ರೋಗಲಕ್ಷಣಗಳು ಕಂಡುಬಂದರೆ ನಮ್ಮ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಅಗತ್ಯಬಿದ್ದರೆ ಮಾತ್ರ ರೋಗಿಗಳನ್ನು ಚಿಕಿತ್ಸೆಗೆ ಹೊಸಪೇಟೆಗೆ ಕಳಿಸಿಕೊಡುತ್ತಾರೆ. ಇಂದಿಗೆ ಎಲ್ಲವೂ ಹತೋಟಿಗೆ ಬಂದಿದ್ದು, ಇಲ್ಲಿನ ನೀರಿನ ಮೂಲಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು, ಸೋರಿಕೆಯಾಗುವ ಪೈಪ್ ಲೈನುಗಳ್ನು ಸರಿಪಡಿಸಲು, ನೀರಿನ ಸಂಗ್ರಹಣಾಗಾರಗಳಿಗೆ ಸೂಕ್ತ ರೀತಿಯಲ್ಲಿ ಬ್ಲೀಂಚಿಂಗ್ ಪೌಡರ್ ಹಾಕಲು ಸೂಚನೆ ನೀಡಿದ್ದೇವೆ ಎಂದರು.  ಪ್ರಸ್ತುತ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಜನರಿಗೆ ಮನೆಗಳಲ್ಲಿ ಕುದಿಸಿ ಆರಿಸಿದ ನೀರನ್ನು ಕುಡಿಯಲು ಸೂಚಿಸಿದ್ದೇವೆ ಎಂದರು.
ಗ್ರಾ.ಪಂ. ಅಧ್ಯಕ್ಷ  ಶಿವಶಂಕ್ರಯ್ಯ ಪತ್ರಕರ್ತರಿಗೆ ಪ್ರತಿಕ್ರಿಯಿಸಿ, ಗ್ರಾಮ ಪಂಚಾಯತಿಯಿಂದ ನೀರಿನ ಟ್ಯಾಂಕ್, ಚರಂಡಿ ಸ್ವಚ್ಚಗೊಳಿಸಿ ಬ್ಲೀಚಿಂಗ್ ಮಾಡಿಸಿದ್ದೇವೆ. ಅಲ್ಲದೇ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಫಾಂಗಿಂಗ್ ಮಾಡಿಸಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ರೋಗ ನಿಯಂತ್ರಣಕ್ಕೆ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ.ಸದಸ್ಯರಾದ ಜಿ.ಸೋಮಣ್ಣ, ವೈದ್ಯಾಧಿಕಾರಿಗಳಾದ ಡಾ. ಬಿ.ಮಂಜುಳ, ಡಾ. ರಾಧಾಕೃಷ್ಣ, ಸಿಬ್ಬಂದಿ ಅನಿಲ್ ಹಾಗೂ ಆರೊಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.