ಗಮನ ಸೆಳೆದ ಹಣ್ಣು, ತರಕಾರಿ ಹಾಗೂ ಹೂಗಳ ಪ್ರದರ್ಶನ ಸಿರಿ ಧಾನ್ಯಗಳಿಂದ ತಯಾರಿಸಿದ ಸಿದ್ದೇಶ್ವರ ಶ್ರೀ, ಚಂದ್ರಯಾನ-3 ಇಸ್ರೋ ರಾಕೆಟ್ ಆಕರ್ಷಣೆ

ರುದ್ರಪ್ಪ ಆಸಂಗಿ

ವಿಜಯಪುರ ಜ.14:ನಗರದ ಬಸವವನದ ಆವರಣದಲ್ಲಿ ಜ.13ರಿಂದ 15ರವರೆಗೆ ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ನಾನಾ ಬಗೆಯ ಫಲಪುಷ್ಪ ಅನಾವರಣಗೊಂಡಿದ್ದು, ಹೊಸ ಲೋಕವೇ ಸೃಷ್ಟಿಯಾಗಿ ಜನರನ್ನು ಮೈ ಮರೆಯುವಂತೆ ಮಾಡಿದೆ.

ಜಿಲ್ಲೆಯ ಮೂಲೆಮೂಲೆಗಳಿಂದ ಫಲಪುಷ್ಪ ಪ್ರದರ್ಶನದ ಸೊಬಗು ಸವಿಯಲು ಸಹಸ್ರಾರು ಮಂದಿ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣಗೊಂಡ ತರೇಹವಾರಿ ಫಲಪುಷ್ಪ ನೋಡಿ ಎರಡು ಕಣ್ಣು ಸಾಲದೆ ಜನರು ಒಂದು ಕ್ಷಣ ಮೈ ಮರೆಯುತ್ತಿದ್ದಾರೆ.

ಸಂಪೂóರ್ಣವಾಗಿ ದ್ರಾಕ್ಷಿಯಿಂದ ತಯಾರಿಸಿದ ಮಂಟಪ, ಹಲವು ಬಗೆಯ ಹೂಗಳಿಂದ ರಚಿಸಿದ ಚಂದ್ರಯಾನ-3ರ ಯಶೋಗಾಥೆ ಸಾರುವ ಇಸ್ರೋ ರಾಕೆಟ್ ಹಾಗೂ 30 ವಿವಿಧ ಬಗೆಯ ಸಾಂಬಾರು ಪದಾರ್ಥಗಳಿಂದ ಸಿದ್ಧಪಡಿಸಿದ ಗಣಪತಿ, ಸಂಪೂರ್ಣವಾಗಿ ಸಿರಿ ಧಾನ್ಯಗಳಿಂದ ತಯಾರಿಸಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸವೇಶ್ವರ ಮೂರ್ತಿ ಕಲಾಕೃತಿ, ನಿಂಬೆಹಣ್ಣುಗಳಿಂದಲೇ ಬಳಸಿ ರಚಿಸಿರುವ ನಿಂಬೆ ಮನೆ, ವಿವಿಧ ಬಗೆಯ ಹೂಗಳನ್ನು ಉಪಯೋಗಿಸಿಕೊಂಡು ಮಾಡಿರುವ ಹರಿಯುವ ನೀರಿನ ಜಲಧಾರೆ, ಮನೆ, ಮೀನುಗಳು, ಕರ್ನಾಟಕ ನಕಾಶೆ, ನವಿಲು ಹಾಗೂ ತರಕಾರಿಯಿಂದ ರಚಿಸಿರುವ ರಂಗೋಲಿ ಆಕರ್ಷಣೆಯಾಗಿದ್ದು, ಈ ಸೊಬಗು ಸವಿಯಲು ಎರಡು ಕಣ್ಣು ಸಾಲವು. ಒಂದಕ್ಕಿಂತ ಒಂದು ಅಂದಚೆಂದವಾಗಿವೆ.

ಹಲವು ಬಗೆಯ ಹಣ್ಣು, ತರಕಾರಿ ಹಾಗೂ ಹೂಗಳ ಪ್ರದರ್ಶನ:

ಮೇಳದಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಹಣ್ಣುಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಪೇರು, ಬಾರೇಕಾಯಿ, ನಿಂಬೆ, ಚಿಕ್ಕು, ರೋಸ್ ಆಪಲ್, ನೇರಳೆ, ಅಂಜೂರ, ಪಪಾಯ ಹಾಗೂ ತರಕಾರಿಗಳಾದ ಈರುಳ್ಳಿ, ಬದನೆ, ಟೊಮೋಟೊ, ಕುಂಬಳಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಬೀಟ್ರೂಟ್, ಮೂಲಂಗಿ, ಪಾಲಕ್, ಕ್ಯಾಬೇಜ್, ಮೆಕ್ಕೆಕಾಯಿ, ನುಗ್ಗೆಕಾಯಿ ವಿವಿಧ ಬಗೆಯ ಹೂಗಳಾದ ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಮಲ್ಲಿಗೆ, ಕನಕಾಂಬರ, ಗುಲಾಬಿಗಳನ್ನು ಪ್ರದರ್ಶನದಲ್ಲಿವೆ. ಆಲದಮರ, ಹಲಸಿನ ಮರ, ಅರಳಿಮರ, ನೇರಳೆ, ವಿವಿಧ ಬೋನ್ಸಾಯ್ ಪದ್ಧತಿಯಲ್ಲಿ ಬೆಳೆದ ಗಿಡಗಳ ಪ್ರದರ್ಶನ ಜನರ ಆಕರ್ಷಣೆಗೆ ಕಾರಣವಾಗಿವೆ. ಹೂವಿನ ಸುಂದರ ಲೋಕವೇ ಆನಾವರಣಗೊಂಡಿದೆ.

ಪ್ರದರ್ಶನ ಹಾಗೂ ಮಾರಾಟ ಮಳಿಗೆ:

ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ರೇಷ್ಮೆ ಇಲಾಖೆ, ತಾಳೆ ಬೆಳೆ ಅಭಿವೃದ್ದಿ ಯೋಜನೆ, ಭಾಗ್ಯಜ್ಯೋತಿ ರೈತ ಉತ್ಪನದ ಮಳಿಗೆ, ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನ, ಹಾಪ್‍ಕಾಮ್ಸ್, ಸೋಲಾರ್ ವಾಟರ್ ಪಂಪ್‍ಸೆಟ್‍ಗಳ ಪ್ರದರ್ಶನ, ವಿವಿಧ ಕಂಪನಿಗಳ ಟ್ರಾಕ್ಟರ್, ರೋಟಿವೆಟರ್ ಕೃಷಿ ಯಂತೋಪಕರಣಗಳ ಸೆರಿದಂತೆ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ರೈತರನ್ನು ಕೈ ಬೀಸಿ ಕರೆಯುತ್ತಿವೆ.

ರೈತರಿಗೆ ಕೃಷಿ ಉಪಕರಣಗಳ ಮಾಹಿತಿ ಕಣಜ ತೆರೆದುಕೊಂಡಿದೆ. ರೈತರು ಕೃಷಿ ಉಪಕರಣಗಳ ಭರ್ಜರಿ ಖರೀದಿಗೆ ಮುಂದಾಗಿದ್ದಾರೆ.

ಫಲಪುಷ್ಪ ಪ್ರದರ್ಶನ ಉದ್ಘಾಟನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ (ರಿ), ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ವಿಜಯಪುರ ಇವರ ಸಹಯೋಗದಲ್ಲಿ ಏರ್ಪಡಿಸಿದ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರರಾದ ಮಹೇಜಬಿನ ಅಬ್ದುಲ್‍ರಜಾಕ ಹೊರ್ತಿ ಅವರು ಚಾಲನೆ ನೀಡಿದರು.

ಸಿಎಚ್‍ಡಿ ಯೊಜನೆಯ ವಿದ್ಯಾರ್ಥಿಗಳಿಗಾಗಿ ತೋಟಗಾರಿಕಾ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳಿಗೆ ತೋಟಗಾರಿಕಾ ಪರಿಕರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಬಾವಿದೊಡ್ಡಿ ರಾಹು¯ಕುಮಾರ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ದಾನಮ್ಮ ಪಾಟೀಲ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಆಡಳಿತ ಮಂಡಳಿಯ ನಿರ್ದೇಶಕÀ ಬಿ.ಎಮ್,ಕೋಕರೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.