ಗಮನ ಸೆಳೆದ ಶಾಲಾ ಪ್ರಾರಂಭೋತ್ಸವ

ದೇವದುರ್ಗ.ಜ.೫- ಶಿಕ್ಷಣ ಇಲಾಖೆ ಆದೇಶ ಹಿನ್ನೆಲೆಯಲ್ಲಿ ೯ತಿಂಗಳ ನಂತರ ಶಾಲೆಗಳು ಆರಂಭವಾಗಿದ್ದು, ತಾಲೂಕಿನ ಖಾನಾಪುರ ಗ್ರಾಮದಲ್ಲಿ ವಿಭಿನ್ನವಾಗಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿದ್ಯಾಗಮ ಯೋಜನೆ ಆರಂಭಿಸಿದ್ದು, ಪ್ರಾರಂಭ ದಿನ ಗ್ರಾಮಸ್ಥರು ಹಬ್ಬದಂತೆ ಕಾರ್ಯಕ್ರಮ ಆಯೋಜಿಸಿದ್ದರು. ಶಾಲೆ ಮುಂಭಾಗ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಶಾಲೆ ಶೃಂಗರಿಸಿದ್ದರು. ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸಾನಿಟೈಸರ್ ವಿತರಿಸಿದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು. ಜಾಥಾದಲ್ಲಿ ಡೊಳ್ಳು ಮೆರವಣಿಗೆ, ಮಹಿಳೆಯರ ಕುಂಭ ಕಳಸ ಮೆರವಣಿಗೆ ಗಮನ ಸೆಳೆಯಿತು. ವಿದ್ಯಾರ್ಥಿನಿಯರೂ ಕುಂಭಹೊತ್ತು ಭಾಗವಹಿಸಿದ್ದರು. ಕೆಲ ಮಕ್ಕಳು ವಿವಿಧ ವೇಷಭೂಷಣ ಧರಿಸಿದ್ದರು. ರಾಯಚೂರು ಟಯಟ್‌ನ ಹಿರಿಯ ಉಪನ್ಯಾಸಕ ಚಂದ್ರಶೇಖರ ಭಂಡಾರಿ, ಜಿಪಂ ಸಿಇಒ ತನ್ವೀರ್ ಆಸೀಫ್, ಡಿಡಿಪಿಐ ಬಿ.ಎಚ್.ಗೋನಾಳ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ನರೇಗಾ ಯೋಜನೆಯಡಿ ನಿರ್ಮಿಸಲಾದ ಶಾಲಾ ಕೊಠಡಿಯನ್ನು ಗಣ್ಯರು ಉದ್ಘಾಟಿಸಿದರು. ಗಬ್ಬೂರು ಜಿಪಂ ಸದಸ್ಯ ಶರಬಣ್ಣ ಸಾಹುಕಾರ, ಬಿಆರ್‌ಪಿ ಆರ್.ಟಿ.ದಾಸ್, ಹೇಮನಾಳ ಪಿಡಿಒ ಶಿವಕುಮಾರ, ಮುಖ್ಯಶಿಕ್ಷಕ ಸಿದ್ರಾಮಣ್ಣ ದಾಸರ್, ಶಿಕ್ಷಕರಾದ ಸಿದ್ದರಾಮಯ್ಯ, ಬಸವಲಿಂಗಪ್ಪ ಕರೇಗಾರ, ವೆಂಕಟೇಶ, ಚಿನ್ನಪ್ಪ, ಗಂಗಾಧರ, ಮನೋಹರ, ಶಿವರೆಡ್ಡಿ, ಸಿದ್ದನಗೌಡ ಇತರರಿದ್ದರು.

೦೫-ಡಿವಿಡಿ-೧

೦೫-ಡಿವಿಡಿ-೨