ಗಮನ ಸೆಳೆದ ವಿವಿಧ ಇಲಾಖೆಯ ಯೋಜನೆಗಳ ಮಾಹಿತಿ ಹಾಗೂ ವಸ್ತು ಪ್ರದರ್ಶನ ಮಳಿಗೆಗಳು


ಬಳ್ಳಾರಿ,ಮಾ.8 :  ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನಭವಿಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಮುನಿಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ಹಾಕಲಾಗಿದ್ದ ವಿವಿಧ ಇಲಾಖೆಯ ಯೋಜನೆಗಳ ಮಾಹಿತಿಯ ಮಳಿಗೆಗಳು ಹಾಗೂ ವಸ್ತು ಪ್ರದರ್ಶನ ಮಳಿಗೆಗಳು ನೋಡುಗರಿಗೆ ಗಮನ ಸೆಳೆದು ಮಾಹಿತಿ ಪಡೆದುಕೊಂಡರು.
ಕೃಷಿ ಇಲಾಖೆಯಿಂದ ಟ್ರ್ಯಾಕ್ಟರ್‍ನ ವಿವಿಧ ಪರಿಕರಗಳ ಯಂತ್ರಗಳ ವಸ್ತು ಪ್ರದರ್ಶನ, ತೋಟಗಾರಿಕೆ ಇಲಾಖೆ ವತಿಯಿಂದ ಹಸಿರು ಮನೆ ನಿರ್ಮಾಣ ಕಾರ್ಯಕ್ರಮ, ಸಮುದಾಯ ನೀರು ಸಂಗ್ರಹಣಾ ಘಟಕ ಕಾರ್ಯಕ್ರಮ, ನೆರಳು ಪರದೆ ನಿರ್ಮಾಣ ಕಾರ್ಯಕ್ರಮ, ಪ್ಯಾಕ್ ಹೌಸ್ ನಿರ್ಮಾಣ ಕಾರ್ಯಕ್ರಮ ಹಾಗೂ ಯಾಂತ್ರೀಕರಣ ಕಾರ್ಯಕ್ರಮ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಕಾರ್ಯಕ್ರಮಗಳ ಮಾಹಿತಿ, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಪವನ್ ಸಾಯಿ ಗಾಮೆರ್ಂಟ್ಸ್, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿವಿಧ ಯೋಜನೆಗಳು ಹಾಗೂ ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳ ಮಾಹಿತಿಗಳನ್ನು ಮಳಿಗೆಗಳಲ್ಲಿ ಒದಗಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಡಾ.ಬಾಬು ಜಗಜೀವನ್ ರಾಂ ದ್ವಿ ಚಕ್ರ ವಾಹನ ಸರಕು ಸಾಗಾಣಿಕೆ ಯೋಜನೆಯಡಿ ಸ್ವಯಂ ಉದ್ಯೋಗಕ್ಕೆ ದ್ವಿ ಚಕ್ರ ವಿತರಣೆಯ ಮಾಹಿತಿ ಸೇರಿದಂತೆ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಗಳ ಮಳಿಗೆಗಳು ನೋಡುಗರ ಗಮನ ಸೆಳೆದವು.