
ಚಿತ್ರದುರ್ಗ.ಏ.೧೯;
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಮತದಾನದ ಬಗ್ಗೆ ಅರಿವು ಮೂಡಿಸಲು ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಮತ್ತು ವಿಕಲಚೇತನರಿಂದ ಏರ್ಪಡಿಸಿದ್ದ ವಿಕಲಚೇತನರ ಬೈಕ್ ರ್ಯಾಲಿ ಗಮನ ಸೆಳೆಯಿತು.ಇಲ್ಲಿನ ಮದಕರಿ ನಾಯಕ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಹಯೋಗದಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನ ಶೇಕಡವಾರು ಪ್ರಮಾಣ ಹೆಚ್ಚಿಸುವ ಹಾಗೂ ನೈತಿಕ ಮತದಾನಕ್ಕೆ ಹೆಚ್ಚಿಸುವ ಸಂಬಂಧ ಹಮ್ಮಿಕೊಂಡಿದ್ದ ವಿಕಲಚೇತನರ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ವಿಕಲಚೇತನರ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು, ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಕಡಿಮೆ ಮತದಾನವಾಗಿರುವ ಪ್ರದೇಶಗಳಲ್ಲಿ ಸ್ವೀಪ್ ಸಮಿತಿಯಿಂದ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಮತ್ತು ವಿಕಲಚೇತನರು ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿ ಎಂದು ಹೇಳಿದರು.