
ತುಮಕೂರು, ಮೇ ೧೮- ಇಬ್ಬರು ಕಳ್ಳರು ಕಾರು ಚಾಲಕನ ಗಮನ ಬೇರೆಡೆ ಸೆಳೆದು ೧.೭೦ ಲಕ್ಷ ರೂ. ನಗದನ್ನು ಕದ್ದು ಪರಾರಿ ಯಾಗಿರುವ ಘಟನೆ ನಗರದ ಅಶೋಕ ರಸ್ತೆಯ ಕೆನರಾಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ. ನಗರದ ಹೊರವಲಯದ ದೇವರಾಯಪಟ್ಟಣದ ಶಿಕ್ಷಕ ಲಕ್ಷ್ಮಿಪುತ್ರ ಬ್ಯಾಂಕ್‌ನಿಂದ ಹಣ ಪಡೆದು ಕಾರಿನಲ್ಲಿ ಕುಳಿತಿದ್ದರು. ದ್ವಿಚಕ್ರ ವಾಹನದಲ್ಲಿ ಬಂದಿರುವ ಒಬ್ಬ ಕಳ್ಳ ತನ್ನ ಜೇಬಿನಿಂದ ಹಣ ಕೆಳಗೆ ಹಾಕಿ ನಿಮ್ಮ ಹಣ ಬಿದ್ದಿದೆ ನೋಡಿ ಎಂದು ಲಕ್ಷ್ಮಿಪುತ್ರ ಅವರಿಗೆ ಹೇಳಿದ್ದಾರೆ. ಅವರು ಹಣ ತೆಗೆದುಕೊಳ್ಳುವಾಗ ಮತ್ತೊಬ್ಬ ಕಳ್ಳ ಕಾರಿನಲ್ಲಿದ್ದ ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ಹಾಡುಹಗಲೇ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಮುಖ ಸ್ಥಳಗಳಲ್ಲಿಯೇ ಈ ರೀತಿ ಕಳ್ಳತನವಾಗುತ್ತಿದೆ. ಪೊಲೀಸರು ಕಳ್ಳರ ಹಾವಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿಲ್ಲ. ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.