ಗಬ್ಬೆದ್ದು ಹೋಗುತ್ತಿವೆ ಉದ್ಯಾನಗಳು ಬೇಕಿದೆ ತಕ್ಷಣದ ಕಾಯಕಲ್ಪ

ವಿಜಯೇಂದ್ರ.ಕುಲಕರ್ಣಿ
ಕಲಬುರಗಿ ನ 15: ನಗರ ಜೀವನದ ಒತ್ತಡದಿಂದ ರಿಲ್ಯಾಕ್ಸ್ ಆಗಲು, ಆರೋಗ್ಯದ ಸ್ಥಿತಿ ವೃದ್ಧಿಸಿಕೊಳ್ಳಲು ಉದ್ಯಾನ ಅಥವಾ ಗಾರ್ಡನ್‍ಗಳಲ್ಲಿ ವಾಕಿಂಗ್ ಮಾಡುವದು, ವಿರಮಿಸುವದು ಒಂದು ಒಳ್ಳೆಯ ಥೆರಪಿ ಆಗಿದೆ. ವಯೋಮಾನ ಹೆಚ್ಚುತ್ತಿರುವವರು, ಸಕ್ಕರೆ ಕಾಯಿಲೆ, ರಕ್ತದೊತ್ತಡ ಮೊದಲಾದ ಜೀವನಶೈಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಉದ್ಯಾನಗಳ ಕಡೆ ಮುಖ ಮಾಡುವದು ಅನಿವಾರ್ಯ ಮತ್ತು ಅಗತ್ಯ ಕೂಡ.
ಇತ್ತೀಚಿಗಂತೂ ಈ ಕೊರೋನಾ ಎಂಬ ಇದಿಮಾಯಿ ವಕ್ಕರಿಸಿದ ಮೇಲೆ ಅರೋಗ್ಯದ ಕಾಳಜಿ ಮಾಡುವದು ಸಹಜವಾಗಿ ಹೆಚ್ಚುತ್ತಿದೆ. ವಿಪರ್ಯಾಸವೆಂದರೆ ಕಲಬುರಗಿ ನಗರದ ಬಹಳ ಕಡೆ ಇರುವ ಉದ್ಯಾನಗಳು ನಿರ್ವಹಣೆ ಇಲ್ಲದೇ ಸೊರಗುತ್ತಿವೆ. ಕಸತುಂಬಿ ಗಬ್ಬೆದು ಹೋಗುತ್ತಿವೆ. ಇದಕ್ಕೆ ಅಪವಾದವೆನ್ನುವಂತೆ ನಗರದ ಅಲ್ಲಲ್ಲಿ ಸುಂದರ ಉದ್ಯಾನಗಳು ಇವೆ.
ನಗರದ ರಾಮಮಂದಿರ ರಿಂಗ್ ರಸ್ತೆ ಬಳಿ ಇರುವ ಜಿಡಿಎ ಉದ್ಯಾನ ಇಂದು ಅನವಶ್ಯಕ ಗಿಡಗಂಟಿಗಳಿಂದ ಉಪಯೋಗಕ್ಕೆ ಬಾರದಂತಾಗುತ್ತಿದೆ.ಮಳೆಗಾಲದಲ್ಲಿ ಇಲ್ಲಿ ವಾರಗಟ್ಟಲೇ ನೀರು ನಿಂತು ಸೊಳ್ಳೆಗಳ ಉತ್ಪಾದನೆಯ ಕೇಂದ್ರವೇ ಆಗುತ್ತಿದೆ.ಇಲ್ಲಿ ಸಂಜೆ ಆದೊಡನೆ ಪಾನಪ್ರಿಯರು ಆಗಮಿಸಿ ಕುಡಿದು ತಿಂದು ಬಾಟಲಿ, ಪ್ಲಾಸ್ಟಿಕ್ ಚೀಲ ಅಳಿದುಳಿದ ಆಹಾರ ಇಲ್ಲಿಯೇ ಎಸೆದು ಹೋಗಿ ಬಿಡುತ್ತಾರೆ.ಒಂದು ಉದ್ಯಾನ ಹೇಗಿರಬಾರದು ಎಂಬುದಕ್ಕೆ ಇದು ಒಂದು ಉದಾಹರಣೆ.
ಕರುಣಾಜಕ ಕತೆ:
ಇಲ್ಲಿಗೆ ಹತ್ತಿರದ ಕರುಣೇಶ್ವರ ನಗರಕ್ಕೆ ಬನ್ನಿ. ಇಲ್ಲಿನ ಜನತಾಗೃಹ ನಿರ್ಮಾಣ ಸಂಘ ಲೇಔಟ್‍ನಲ್ಲೊಂದು ಉದ್ಯಾನವಿದೆ. ಇದರದು ಕರುಣಾಜನಕ ಕಥೆ.ಉದ್ಯಾನದಲ್ಲಿ ಶಿಥಿಲಾವಸ್ಥೆಯ ಸರಕಾರಿ ಪ್ರಾಥಮಿಕ ಶಾಲೆ ಇದೆ.
ಕೆಲವೇ ವರ್ಷಗಳ ಹಿಂದೆ ಇಲ್ಲಿ ಸುಂದರ ಉದ್ಯಾನ ನಿರ್ಮಾಣವಾಗಿತ್ತು. ಸುತ್ತ ಕುಳಿತುಕೊಳ್ಳಲು ಕಲ್ಲಿನ ಆಸನ ಅಳವಡಿಸಿ ,ವಾಯುವಿಹಾರಕ್ಕೆ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿತ್ತು.ಅದೇ ಕೊನೆ. ನಂತರ ಹಾಳಾಗಿ ಹೋದ ಈ ಉದ್ಯಾನದತ್ತ ಯಾರೂ ತಿರುಗಿ ನೋಡಿಲ್ಲ.
ಆಸನಗಳು ನೆಲಕ್ಕೆ ಉರುಳಿ ಎಷ್ಟೋ ಕಾಲವಾಯಿತು.ವಾಕಿಂಗ್ ಟ್ರ್ಯಾಕ್ ಕಿತ್ತು ಹೋಗಿದೆ.ಅನವಶ್ಯಕ ಮುಳ್ಳುಕಂಟಿ ಉದ್ಯಾನ ತುಂಬ ಆವರಿಸಿವೆ. ಸ್ವಚ್ಛತೆಯ ಅಭಿಯಾನದ ಮಾತು ಎಲ್ಲೆಡೆ ಕೇಳುತ್ತಿದೆ. ಆದರೆ ಇಲ್ಲಿನ ಕೆಲವು ನಾಗರಿಕರು ಉದ್ಯಾನದ ಕಂಪೌಂಡ್ ಸುತ್ತ ಕಸ ತಂದು ಚೆಲ್ಲುತ್ತಾರೆ.ಬೇಸತ್ತ ಕಾಲೋನಿಯ ಹಿರಿಯರು, ಮಹಿಳೆಯರು, ಮಕ್ಕಳು ಉದ್ಯಾನದತ್ತ ಬರುವದನ್ನು ನಿಲ್ಲಿಸಿದ್ದಾರೆ.ಉದ್ಯಾನ ಇದ್ದೂ ಇಲ್ಲದಂತಾಗಿದೆ. ಈ ಉದ್ಯಾನಕ್ಕೆ ಮತ್ತೆ ಎಂದಿನ ಜೀವಕಳೆಗಾಗಿ ಇಲ್ಲಿಯ ಜನ ಕಾಯುತ್ತಿದ್ದಾರೆ.


ಗಾರ್ಡನ್‍ಗಳ ನಿರ್ವಹಣೆ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ಕಾಳಜಿ ವಹಿಸಬೇಕು.ನಾಗರಿಕರೂ ಸಹ ಸ್ವಚ್ಛತೆ ಕಾಪಾಡಿಕೊಂಡು ಬರಬೇಕು.
ರಾಜಶೇಖರ.ಸಾಯಿನಗರ ನಿವಾಸಿ.


ಕರುಣೇಶ್ವರ ನಗರದ ಗಾರ್ಡನ್ ದುರಸ್ತಿ ಮಾಡಲು ಆಗ್ರಹಿಸುತ್ತೇನೆ.ಏಕೆಂದರೆ ದೂರ ವಾಕಿಂಗ್ ಮಾಡಲು ಆಗದ ನಮಗೆ ಇದರಿಂದ ಅನುಕೂಲವಾಗುತ್ತದೆ.
ಗೀತಾಬಾಯಿ.ಗೃಹಿಣಿ