ಗಬ್ಬೂರು: ವೈದ್ಯರಿಗಾಗಿ ರೋಗಿಗಳ ಪರದಾಟ

ದೇವದುರ್ಗ.ನ.೧೦-ತಾಲೂಕಿನ ಗಬ್ಬೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಹೋಬಳಿ ವ್ಯಾಪ್ತಿಗೆ ಹತ್ತಾರು ಹಳ್ಳಿಗಳು ಒಳಪಡುತ್ತಿದ್ದು, ಗ್ರಾಮದಲ್ಲಿ ಸುಮಾರು ೨೦ಸಾವಿರ ಜನಸಂಖ್ಯೆಯಿದೆ. ಸುತ್ತಲಿನ ಹಳ್ಳಿಯ ಜನರ ಇದೇ ಕೇಂದ್ರಕ್ಕೆ ಬರುತ್ತಿದ್ದಾರೆ. ಮಂಗಳವಾರ ನೂರಾರು ರೋಗಿಗಳು ಆಸ್ಪತ್ರೆಗೆ ಬಂದಿದ್ದು, ವೈದ್ಯರು ಸಿಗದ ಕಾರಣ ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಒಬ್ಬರು ಎಂಬಿಬಿಎಸ್ ವೈದ್ಯರಿದ್ದು, ಜಿಲ್ಲಾ ಮಟ್ಟದ ಸಭೆ ಹಿನ್ನೆಲೆ ಆಸ್ಪತ್ರೆ ಬಂದಿಲ್ಲ. ಒಬ್ಬರು ಆಯುಷ್ ವೈದ್ಯರಿದ್ದು, ಬೆಳಗ್ಗೆ ೧೨ಗಂಟೆಯಾದರೂ ಆಸ್ಪತ್ರೆ ಬಂದಿಲ್ಲ. ಐದಾರು ಸಿಬ್ಬಂದಿಯಿದ್ದು, ರೋಗಿಗಳ ಸಮಸ್ಯೆಗೆ ಸೂಕ್ತ ಸಂದಿಸಿ ಚಿಕಿತ್ಸೆ ನೀಡುತ್ತಿಲ್ಲ. ಇದರಿಂದ ರೋಗಿಗಳು ಅನಿವಾರ್ಯವಾಗಿ ದುಬಾರಿ ಹಣ ನೀಡಿ ಖಾಸಗಿ ಆಸ್ಪತ್ರೆಗೆ ಹೋಗುವಂತಾಗಿದೆ.
ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಫೋನ್ ಮಾಡಿದರೂ ರಿಸಿವ್ ಮಾಡುತ್ತಿಲ್ಲ. ಆಸ್ಪತ್ರೆಗೆ ಸೂಕ್ತ ಸೌಲಭ್ಯ ಇಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಆಸ್ಪತ್ರೆ ಬಗ್ಗೆ ವಿಶೇಷ ಗಮನಹರಿಸಿ ಆಸ್ಪತ್ರೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ವೈದ್ಯರು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಬೇಕು ಎಂದು ಗ್ರಾಮಸ್ಥರಾದ ಶಾಂತಕುಮಾರ ಹೊನ್ನಟಗಿ ಒತ್ತಾಯಿಸಿದ್ದಾರೆ.

ಕೋಟ್=======
ತಾಲೂಕಿನ ವೈದ್ಯರ ಕೊರತೆ ಇರುವುದು ನಿಜ. ಇರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಬಳಸಿಕೊಂಡು ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಗಬ್ಬೂರು ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ.
| ಡಾ.ಬನದೇಶ್ವರ
ಟಿಎಚ್‌ಒ