ಗಬ್ಬೂರು ದವಾಖಾನೆಗೆ ಡಾಕ್ಟ್ರೆ ಇಲ್ಲ!

ದೇವದುರ್ಗ,ಮಾ.೦೫- ತಾಲೂಕಿನ ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ವಾರದಿಂದ ಮುಖ್ಯ ವೈದ್ಯರಿಲ್ಲದೆ ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಸಣ್ಣಪುಟ್ಟ ಕಾಯಿಲೆಗೂ ಖಾಸಗಿ ಆಸ್ಪತ್ರೆಗೆ ಅಲೆಯುವಂತಾಗಿದೆ.
ಕೇಂದ್ರದಲ್ಲಿ ಈಹಿಂದೆ ಇದ್ದ ಕಾಯಂ ವೈದ್ಯಾಧಿಕಾರಿ ೬ತಿಂಗಳ ಹಿಂದೆ ವರ್ಗಾವಣೆಯಾಗಿದ್ದರು. ನಂತರ ಹಲವು ದಿನಗಳಿಂದ ಹುದ್ದೆ ಖಾಲಿಯಿತ್ತು. ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸಂಘಟನೆಗಳು ಪ್ರತಿಭಟನೆ ಮಾಡಿದ್ದರಿಂದ ಪಕ್ಕದ ರಾಮದುರ್ಗ ಕೇಂದ್ರದ ವೈದ್ಯಾಧಿಕಾರಿ ಡಾ.ಮಹಾದೇವರನ್ನು ಎರವಲು ಸೇವೆ ಆಧಾರದಲ್ಲಿ ೩ದಿನ ಗಬ್ಬೂರು ಕೇಂದ್ರ ಉಳಿದ ೩ದಿನ ರಾಮದುರ್ಗದಲ್ಲಿ ಕೆಲಸ ಮಾಡಲು ಸೂಚಿಸಲಾಗಿತ್ತು.
೩ತಿಂಗಳಿನಿಂದ ಡಾ.ಮಹಾದೇವ ತಲಾ ಮೂರುದಿನ ಎರಡು ಕಡೆ ಕೆಲಸ ಮಾಡುತ್ತಿದ್ದರು. ಆದರೆ, ರಾಮದುರ್ಗ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಇಲ್ಲಿಯೇ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುವಂತೆ ಸ್ಥಳೀಯರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಡಹಾಕಿದ್ದಾರೆ. ಇದರಿಂದ ಒಂದು ವಾರದಿಂದ ಡಾಕ್ಟರ್ ಬಾರದೆ ರೋಗಿಗಳು ಆಸ್ಪತ್ರೆಗೆ ಬಂದು ಬರೀಕೈಲಿ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ನಾಲ್ವರು ಶುಶ್ರೂಷಕಿಯರು, ಒಬ್ಬರು ಹೊರಗುತ್ತಿಗೆ ನೌಕರರು ಸಣ್ಣಪುಟ್ಟ ಕಾಯಿಲೆಗೆ ಗುಳಿಗೆ ನೀಡಿ ಕಳಿಸುತ್ತಿದ್ದಾರೆ.
ಗಬ್ಬೂರು ವಿಸ್ತೀರ್ಣದಲ್ಲಿ ದೊಡ್ಡ ಹೋಬಳಿಯಾಗಿದ್ದು, ಸುಮಾರು ೪೦ಹಳ್ಳಿಗಳು ಅವಲಂಬಿಸಿವೆ. ಆರೋಗ್ಯ ಕೇಂದ್ರಕ್ಕೆ ನಿತ್ಯ ನೂರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಗರ್ಭಿಣಿಯರು, ವಯವೃದ್ಧರು, ಮಕ್ಕಳು ಹೆಚ್ಚಾಗಿ ಬರುತ್ತಾರೆ. ಆರೋಗ್ಯ ಕವಚ ವಾಹನದಿಂದಲೇ ನಿತ್ಯ ಮೂರ್‍ನಾಲ್ಕು ಕೇಸ್‌ಬರುತ್ತವೆ. ವೈದ್ಯರಿಲ್ಲದೆ ತುರ್ತು ಚಿಕಿತ್ಸೆಗೆ ರಾಯಚೂರಿಗೆ ತೆರಳುವ ಸ್ಥಿತಿಯಿದೆ.
ಸಮಸ್ಯೆಗಳ ಸುಳಿಯಲ್ಲಿ ಕೇಂದ್ರ :
ಗಬ್ಬೂರು ಆರೋಗ್ಯ ಕೇಂದ್ರಕ್ಕೆ ೪೦ಹಳ್ಳಿಗಳು ಒಳಪಡುತ್ತಿದ್ದು, ಒಂದಿಲ್ಲೊಂದು ಸಮಸ್ಯೆಯಲ್ಲಿ ನರಳುತ್ತಿದೆ. ಈ ಹಿಂದೆ ೧೦೮ವಾಹನ ಹಲವು ತಿಂಗಳಿನಿಂದ ಕೆಟ್ಟುನಿಂತಿತ್ತು. ಅಂದು ಕಲ್ಮಲಾ ಕೇಂದ್ರದಿಂದ ತಾತ್ಕಾಲಿಕ ವಾಹನ ಕಲ್ಪಿಸಲಾಗಿತ್ತು. ಈಗ ವೈದ್ಯಾಧಿಕಾರಿ ಹುದ್ದೆ ಖಾಲಿಯಿದ್ದು ರೋಗಿಗಳು ನರಳಾಡುವಂತಾಗಿದೆ. ಕೇಂದ್ರದಲ್ಲಿ ಮೂಲಸೌಲಭ್ಯ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಕುಡಿವ ನೀರು, ಸ್ವಚ್ಛತೆ, ವಿದ್ಯುತ್ ಸಮಸ್ಯೆಯಿದೆ. ಕೇಂದ್ರದಲ್ಲಿ ಔಷಧ ಸಿಗದೆ, ರೋಗಿಗಳು ಖಾಸಗಿ ಮೆಡಿಕಲ್‌ಗೆ ಅಲೆಯಬೇಕಿದೆ. ಸೂಕ್ತ ರಕ್ಷಣೆ ಇಲ್ಲದೆ ಬಿಡಾಡಿ ದನ, ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದೆ.

ಕೋಟ್=======
ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಲವು ದಿನಗಳಿಂದ ಸಮಸ್ಯೆಯಲ್ಲಿ ನರಳುತ್ತಿದೆ. ವಾರದಿಂದ ವೈದ್ಯರಿಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಈಹಿಂದೆ ತಿಂಗಳುಗಳ ಕಾಲ ೧೦೮ವಾಹನ ಕೆಟ್ಟುನಿಂತು ಜನರು ಸಮಸ್ಯೆ ಎದುರಿಸುತ್ತಿದ್ದರು. ಫೋನ್ ಮಾಡಿದರೂ ಟಿಎಚ್‌ಒ, ಡಿಎಚ್‌ಒ ರಿಷವ್ ಮಾಡುತ್ತಿಲ್ಲ. ಜನರ ಸಮಸ್ಯೆ ಯಾರಿಗೆ ಹೇಳಬೇಕು?.

| ರಾಜಪ್ಪ ಸಿರವಾರಕರ್
ಸ್ಥಳೀಯರು

ಕೋಟ್=====
ಗಬ್ಬೂರು ಆಸ್ಪತ್ರೆ ಅನಾರೋಗ್ಯದಿಂದ ನರಳುತ್ತಿದೆ. ರೋಗಿಗಳ ಕಷ್ಟ ಯಾರೂ ಕೇಳುತ್ತಿಲ್ಲ. ವೈದ್ಯರಿಲ್ಲ ಅಂದ್ರೆ ಅದನ್ನು ಆಸ್ಪತ್ರೆ ಎಂದು ಹೇಗೆ ಕರೆಯಬೇಕು. ವಾರದಿಂದ ಸಮಸ್ಯೆಯಾಗಿದ್ದು, ಗಬ್ಬೂರಿನಲ್ಲಿ ಒಬ್ಬರೂ ಎಂಬಿಬಿಎಸ್ ವೈದ್ಯರಿಲ್ಲ. ತುರ್ತು ಚಿಕಿತ್ಸೆ ಬೇಕಿದ್ದರೆ ೩೫ಕಿಮೀ ರಾಯಚೂರಿಗೆ ಹೋಗಬೇಕು. ಕಾಯಂ ವೈದ್ಯರನ್ನು ನೇಮಿಸದಿದ್ದರೆ ಅಧಿಕಾರಿಗಳಿಗೆ ದಿಗ್ಬಂಧ ಹಾಕುತ್ತೇವೆ.

| ಶಾಂತಕುಮಾರ ಹೊನ್ನಟಗಿ
ಎಂಆರ್‌ಎಚ್‌ಎಸ್ ತಾಲೂಕು ಅಧ್ಯಕ್ಷ

ಕೋಟ್=====
ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆಯಿದ್ದು, ತಾತ್ಕಾಲಿಕವಾಗಿ ರಾಮದುರ್ಗ ವೈದ್ಯಾಧಿಕಾರಿ ಮಹಾದೇವರಿಗೆ ೩ದಿನ ಕೆಲಸ ಮಾಡಲು ತಿಳಿಸಲಾಗಿತ್ತು. ರಾಮದುರ್ಗದ ಜನರು ವೈದ್ಯರಿಗೆ ಏನು ಹೇಳಿದ್ಯಾರೋ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ.

| ಡಾ.ಬನದೇಶ್ವರ
ತಾಲೂಕು ಆರೋಗ್ಯ ಅಧಿಕಾರಿ