ಗಬ್ಬೂರು ಆಸ್ಪತ್ರೆಗೆ ಮೂಲಸೌಲಭ್ಯ ಕಲ್ಪಿಸಿ

ದೇವದುರ್ಗ.ನ.೧೨-ತಾಲೂಕಿನ ಗಬ್ಬೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ತಜ್ಞ ವೈದ್ಯರು ಸೇರಿ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕು ವೈದ್ಯಾಧಿಕಾರಿ ಡಾ.ಬನದೇಶ್ವರಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು.
ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಲವು ಸಮಸ್ಯೆಗಳಿಂದ ನರಳುತ್ತಿದೆ. ಸುಮಾರು ೪೦ಹಳ್ಳಿಗಳನ್ನು ಒಳಗೊಂಡಿದ್ದು, ತಜ್ಞ ವೈದ್ಯರು, ಸಿಬ್ಬಂದಿ ಕೊರತೆ ಕಾಡುತ್ತಿದೆ. ಡೆಲಿವರಿಗೆ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ ಕಾರಣ ತಾಯಿ ಮಗುವಿನ ಸಾವು ಹೆಚ್ಚುತ್ತಿದ್ದು, ಅನಿವಾರ್ಯವಾಗಿ ಜನರು ಖಾಸಗಿ ಆಸ್ಪತ್ರೆಗೆ ಹೋಗುವ ಸ್ಥಿತಿಯಿದೆ. ವಾರದ ಹಿಂದೆ ಮಲದಕಲ್ ಗ್ರಾಮದ ಗರ್ಭಿಣಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ವೈದ್ಯರ ಕೊರತೆ ನೆಪದಲ್ಲಿ ರಾಯಚೂರಿಗೆ ಕಳಿಸುವುದಾಗ ತಾಯಿಮಗು ಮಾರ್ಗಮಧ್ಯ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಅಗತ್ಯ ಪರಿಕರ, ಜನರೇಟರ್ ಸಮಸ್ಯೆಯಿಂದ ವೈದ್ಯರು ಕೈಚೆಲ್ಲುವಂತಾಗಿದೆ ಎಂದು ಆರೋಪಿಸಿದರು.
ಕೂಡಲೇ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ತಜ್ಞ ಎಂಬಿಬಿಎಸ್ ವೈದ್ಯರನ್ನು ನೇಮಿಸಬೇಕು. ಗರ್ಭಿಣಿ ಹಾಗೂ ಬಾಣಂತಿಯರಿಗೆ ಬೇಕಾದ ಉಪಕರಣ ಒದಗಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ, ರಾಜಪ್ಪ ಸಿರವಾರಕರ್, ಮರೆಪ್ಪ ಮಲದಕಲ್, ಮಾರೆಪ್ಪ ಹೊನ್ನಟಗಿ, ಈಶಪ್ಪ ಮದರಕಲ್, ಮಲ್ಲಪ್ಪಗೌಡ ಮಾಪಾ, ಹುಲಿಗೆಪ್ಪ ಇತರರಿದ್ದರು.