ಗಬ್ಬೂರಿನಲ್ಲಿ ಇಬ್ಬರು ನಿರಾಶ್ರಿತರಿಗೆ ವಾತ್ಸಲ್ಯದ ಸೂರು

ದೇವದುರ್ಗ.ನ.೧೭- ಸಮೀಪದ ಗಬ್ಬೂರು ಗ್ರಾಮದ ಇಬ್ಬರು ನಿರ್ಗತಿಕರ ಬದುಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಕಿನ ಕಿರಣವಾಗಿ ಮೂಡಿಬಂದಿದೆ. ಕಸ್ತೂರಮ್ಮ ಹಾಗೂ ಮಲ್ಲಮ್ಮ ಭೀಮಣ್ಣ ಫಲಾನುಭವಿಗಳಿಗೆ ವಾತ್ಸಲ್ಯ ಸೂರು ಯೋಜನೆಯಡಿ ಸಂಸ್ಥೆ ಎರಡು ಹೊಸ ಮನೆ ನಿರ್ಮಿಸಿ ನಿರ್ಗತಿಕರ ಬಾಳಿಗೆ ಆಸರೆಯಾಗಿದೆ.
ಯೋಜನೆಯ ಕೊಪ್ಪಳ ವಿಭಾಗದ ಪ್ರಾದೇಶಿಕ ನಿರ್ದೇಶಕ ಗಣೇಶ್.ಬಿ ಫಲಾನುಭವಿ ಕಸ್ತೂರಮ್ಮ ಹಾಗೂ ಮಲ್ಲಮ್ಮ ಭೀಮಣ್ಣ ದಂಪತಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸೇವಾಮನೋಭಾವನೆ ಚಿಂತನೆಯಡಿ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಸೂರು ಯೋಜನೆಯಡಿ ಇಬ್ಬರಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಇದರ ವೆಚ್ಚವನ್ನು ಸಂಸ್ಥೆ ಬರಿಸಿದ್ದು, ಬಡವರ ಬಾಳಿಗೆ ಬೆಳಕಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ೪ದಶಕಗಳಿಂದ ರಾಜ್ಯಾದ್ಯಂತ ಸೇವಾ ಚಟುವಟಿಕೆಗಳನ್ನು ಮುನ್ನಡೆಸುತ್ತಾ ಬರುತ್ತಿದ್ದು ರಾಜ್ಯದಲ್ಲಿ ೧೨ಸಾವಿರ ಕಡುಬಡವ ವೃದ್ಧ ಕುಟುಂಬಗಳಿಗೆ ಜೀವನ ನಿರ್ವಹಣೆ ಅಗತ್ಯತೆಗಳನ್ನು ಪೂರೈಸಲು ಮಾಸಿಕ ಸಹಾಯಧನ ನೀಡುತ್ತಿದೆ. ನಿರ್ಗತಿಕ ಕುಟುಂಬಗಳ ಸದಸ್ಯರು ಹಸಿವನ್ನು ನೀಗಿಸಲು ಶ್ರೀ ಕ್ಷೇತ್ರ ನೆರವಾಗುತ್ತಿದೆ. ಇಂತಹ ಅರ್ಹ ಕುಟುಂಬಗಳನ್ನು ಗುರುತಿಸಿ ಪಾತ್ರೆಪರಿಕರಗಳು, ವಸ್ತ್ರ ಹಾಗೂ ಅಗತ್ಯ ವಸ್ತುಗಳ ಕಿಟ್‌ಗಳನ್ನು ಒದಗಿಸಿದೆ. ಈಗ ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿರುವ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡುವ ಕಾರ್ಯಕ್ಕೆ ಸಂಸ್ಥೆ ಮುಂದಾಗಿದೆ.
ಆಧುನಿಕ ಯುಗದಲ್ಲಿಯೂ ಇಂತಹ ಹಲವು ಕುಟುಂಬಗಳಿದ್ದು ಇವರಿಗೆ ಆಸರೆಯನ್ನೊದಗಿಸುವ ಡಾ.ಹೇಮಾವತಿ ವಿ ಹೆಗ್ಗಡೆಯವರ ಕನಸು ಇದೀಗ ನನಸಾಗಿದೆ. ವಾತ್ಸಲ್ಯ ಮನೆಯೊಂದಿಗೆ ಮೂಲಭೂತ ಸೌಕರ್ಯ ಗಳಾದ ಸ್ನಾನ ಗೃಹ ಮತ್ತು ಶೌಚಗೃಹ ನಿರ್ಮಾಣ ಮಾಡಿ ಇಂದು ಹಸ್ತಾಂತರ ಮಾಡಿದ್ದೇವೆ ಎಂದರು.
ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ್, ಯೋಜನಾಧಿಕಾರಿ ರಾಜೇಶ್.ಎಂ ಕಾನರ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸತೀಶ್ ಬಳೆ ಹಾಗೂ ಯುವ ಬ್ರಿಗೇಡ್ ಗಬ್ಬೂರು ಸದಸ್ಯರು, ಯೋಜನೆ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು ಇದ್ದರು.