ಗಬ್ಬು ನಾರುತ್ತಿರುವ ಕಲಬುರಗಿ ನಗರದ ಇ- ಟಾಯ್ಲೆಟ್‍ಗಳು

ಕಲಬುರಗಿ.ನ.9: ನಗರದಲ್ಲಿ ಶೌಚಾಲಯಗಳ ಸಮಸ್ಯೆಗೆ ಮಹಾನಗರ ಪಾಲಿಕೆಯು ಸ್ಪಂದಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಇ-ಟಾಯ್ಲೆಟ್‍ಗಳಿಗೆ ಸೂಕ್ತ ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿದ್ದು, ಅವು ಇದ್ದೂ ಇಲ್ಲದಂತಾಗಿವೆ.
ಕಳೆದ 2017ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಮಹಾನಗರ ಪಾಲಿಕೆಯು ನಗರದಾದ್ಯಂತ ಸುಮಾರು 12 ಇ- ಟಾಯ್ಲೆಟ್‍ಗಳನ್ನು ನಿರ್ಮಿಸಿದ ಬಳಿಕ ಅದನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದು, ಬಹಿರ್ದೆಸೆ ಹಾಗೂ ಮೂತ್ರ ವಿಸರ್ಜನೆ ಅನಿವಾರ್ಯವಾಗಿ ಪರಿಣಮಿಸಿದೆ.
ಸಾರ್ವಜನಿಕ ಸ್ಥಳಗಳೂ ಸೇರಿದಂತೆ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಬಾರದೆಂಬ ಉದ್ದೇಶದಿಂದ ನಿರ್ಮಿಸಲಾದ ಇ- ಟಾಯ್ಲೆಟ್‍ಗಳ ಮೂಲಕ ಸ್ಚಚ್ಛ ಹಾಗೂ ಸುಂದರ ನಗರವನ್ನಾಗಿಸಲು ಲಕ್ಷಾಂತರ ರೂ.ಗಳ ವೆಚವನ್ನು ಮಾಡಲಾಗಿದ್ದು, ಆ ಇ- ಟಾಯ್ಲೆಟ್‍ಗಳು ಈಗ ಉಪಯೋಗಕ್ಕೆ ಬಾರದಂತೆ ಕೆಟು ನಿಂತು ಈಗ ಅವೇ ಗಬ್ಬೆದ್ದು ನಾರುತ್ತಿವೆ.
ಹೌದು, ಮಹಾನಗರ ಪಾಲಿಕೆಯು ಇ. ಟಾಯ್ಲೆಟ್‍ಗೆ ಸೂಕ್ತ ನಿರ್ವಹಣೆ ಕೈಗೊಳ್ಳದೇ ಇರುವುದರಿಂದ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಇ- ಟಾಯ್ಲೆಟ್ ಮಶಿನ್‍ನಲ್ಲಿ ಹಾಕಿರುವ ಬಂದಿ ನಾಣ್ಯಗಳು ಅಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತವೆ. 2017ರಲ್ಲಿ ಸುಮಾರು 12 ಇ- ಟಾಯ್ಲೆಟ್‍ಗಳನ್ನು ನಿರ್ಮಿಸಿದ ಬಳಿಕ ಅವುಗಳ ನಿರ್ವಹಣೆ ಮಾತ್ರ ಅಸಮರ್ಪಕವಾಗಿದೆ.
ಹಲವಾರು ಇ- ಟಾಯ್ಲೆಟ್‍ಗಳು ಕೆಟ್ಟು ನಿಂತಿವೆ. ಅಲ್ಲದೇ ಇ- ಟಾಯ್ಲೆಟ್‍ನಲ್ಲಿ ನೀರಿನ ಸಮಸ್ಯೆ ಸೇರಿದಂತೆ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಜನರು ಹಾಕಿರುವ ನಾಣ್ಯಗಳು ಕೂಡ ಬಾಕ್ಸ್‍ನಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಿರುವ ಪರಿಣಾಮ ಜನರು ಮತ್ತೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆಯ ಬೇಜವ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಒಂದೊಂದು ಇ- ಟಾಯ್ಲೆಟ್‍ಗೆ 6 ಲಕ್ಷ ರೂ.ಗಳನ್ನು ವೆಚ್ಚ ಮಾಡಿ ನಗರದ ಸೂಪರ್ ಮಾರ್ಕೆಟ್, ರೈಲು ನಿಲ್ದಾಣ, ಮೋಹನ್ ಲಾಡ್ಜ್ ಎದುರುಗಡೆ, ರಾಷ್ಟ್ರಪತಿ ಚೌಕ್, ಕೇಂದ್ರೀಯ ಬಸ್ ನಿಲ್ದಾಣ, ಮಹಾತ್ಮಾ ಬಸವೇಶ್ವರ್ ನಗರ ಸೇರಿದಂತೆ ಜನನಿಬಿಡ ಪ್ರದೇಶ ಮತ್ತು ಪ್ರಮುಖ ಪ್ರದೇಶಗಳಲ್ಲಿ ನಿರ್ಮಾಣ ಮಾಡಲಾಗಿಎದೆ. ಆದಾಗ್ಯೂ, ಸಂಸ್ಥೆ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಇ- ಟಾಯ್ಲೆಟ್‍ಗಳು ಗಬ್ಬೆದ್ದು ನಾರುತ್ತಿದ್ದು, ಜನರ ಬಳಕೆಗೂ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇ- ಟಾಯ್ಲೆಟ್‍ಗಳ ನಿರ್ವಹಣೆ ಕುರಿತು ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಪ್ರತಿಕ್ರಿಯಿಸಿ, ಇ- ಟಾಯ್ಲೆಟ್ ನಿರ್ಮಿಸಿದ ಸಂಸ್ಥೆಯ ನಿರ್ವಹಣಾ ಗುತ್ತಿಗೆ ಮುಗಿದ ಹಿನ್ನೆಲೆಯಲ್ಲಿ ಉಪಯೋಗಕ್ಕೆ ಬಾರದಂತೆ ಆಗಿದೆ. ಹಾಗಾಗಿ ತಕ್ಷಣ ಇ- ಟಾಯ್ಲೆಟ್ ನಿರ್ಮಿಸಿದವರಿಗೆ ಮತ್ತೆ ಕರೆದು ಅವರಿಗೆ ನಿರ್ವಹಣಾ ಗುತ್ತಿಗೆ ಕೊಡಲಾಗುವುದು ಜೊತೆಗೆ ನಗರದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇ- ಟಾಯ್ಲೆಟ್‍ಗಳನ್ನು ನಿರ್ಮಿಸಿ ನಗರವನ್ನು ಸ್ವಚ್ಛವಾಗಿಡುವಂತಹ ಕೆಲಸಕ್ಕೆ ಪಾಲಿಕೆ ಮುಂದಾಗಲಿದೆ ಎಂದು ತಿಳಿಸಿದ್ದಾರೆ.