ಗನ್ ಜೊತೆ ವಿಮಾನ ಏರಿದ ಪ್ರಯಾಣಿಕ ಸೆರೆ!

ಮಿಯಾಮಿ (ಅಮೆರಿಕಾ), ಡಿ.೪- ವಿಮಾನ ನಿಲ್ದಾಣಗಳಲ್ಲಿ ಕಠಿಣ ಭದ್ರತೆಯ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ವಿಮಾನ ನಿಲ್ದಾಣ ಒಳ ಪ್ರವೇಶಿಸುವ ಹಾಗೂ ವಿಮಾನ ಏರುವ ಮುನ್ನ ಹಲವಾರು ರೀತಿಯಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವುದು ಸಾಮಾನ್ಯ ಸಂಗತಿ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಅಫ್ರಿಕಾದ ಬಾರ್ಬೆಡೋಸ್ ದೇಶದಿಂದ ವಿಮಾನ ಏರಿದ್ದ ಪ್ರಯಾಣಿಕನೊಬ್ಬನ ಬ್ಯಾಗ್‌ನಲ್ಲಿ ಬುಲೆಟ್‌ಗಳು ತುಂಬಿದ್ದ ಗನ್ ಪತ್ತೆಯಾಗಿರುವುದು ಇದೀಗ ಅಚ್ಚರಿಗೆ ಕಾರಣವಾಗಿದ್ದು, ಸದ್ಯ ಅಧಿಕಾರಿಗಳು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಮರೊನ್ ಹೈಂಡ್ಸ್ ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಈತನನ್ನು ಅಮೆರಿಕಾದ ಅಧಿಕಾರಿಗಳು ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡಿದ್ದಾರೆ. ಇದರನ್ವಯ ಈತನ ಮೇಲೆ ೫ ಸಾವಿರ ಅಮೆರಿಕನ್ ಡಾಲರ್ ದಂಡ ಸೇರಿದಂತೆ ಐದು ವರ್ಷದ ಕಾರಾಗೃಹ ಸಜೆ ವಿಧಿಸುವ ಸಾಧ್ಯತೆ ಇದೆ. ಬಾರ್ಬೆಡೋಸ್‌ನಿಂದ ಅಮೆರಿಕಾದ ಮಿಯಾಮಿ (ಫ್ಲೋರಿಡಾ) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕ ಕ್ಯಾಮರೊನ್‌ನ ಬ್ಯಾಗ್‌ನಲ್ಲಿ ಬುಲೆಟ್‌ಗಳು ತುಂಬಿದ್ದ ಗನ್ ಪತ್ತೆಯಾಗಿದೆ ಎನ್ನಲಾಗಿದೆ. ಬಾರ್ಬೆಡೋಸ್ ವಿಮಾನ ನಿಲ್ದಾಣದ ಅಧಿಕಾರಿಗಳು ಗನ್ ಜೊತೆ ಪ್ರಯಾಣಿಸಲು ಈತನಿಗೆ ಹೇಗೆ ಅವಕಾಶ ನೀಡಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಬಾರ್ಬೆಡೋಸ್‌ನಿಂದ ವಿಮಾನ ಏರಿದ ಈತ ಮಿಯಾಮಿ ತಲುಪಿದ ಬಳಿಕ ನಡೆದ ತಪಾಸಣೆಯ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಇದು ಹೇಗೆ ಸಾಧ್ಯವಾಯಿತು ಎಂಬ ಕುರಿತು ಇದೀಗ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ವಿಮಾನ ಏರುವ ಮುನ್ನ ಮೆಟಲ್ ಡಿಟೆಕ್ಟರ್ ಸೇರಿದಂತೆ ಹಲವಾರು ಉಪಕರಣಗಳಿಂದ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತದೆ. ಆದರೆ ಈತ ಅದೆಲ್ಲಾವನ್ನು ದಾಟಿ ವಿಮಾನದ ಒಳಗೆ ಗನ್ ಹೇಗೆ ತಂದುಕೊಂಡ ಎಂಬ ಬಗ್ಗೆ ಹಲವರಲ್ಲಿ ಅಚ್ಚರಿಗೆ ಕಾರಣವಾಗಿದೆ. ಅದೂ ಅಲ್ಲದೆ ಬಾರ್ಬೆಡೋಸ್‌ನ ಪ್ರಧಾನಿ ಮಿಯಾ ಮೊಟ್ಲೆ ಕೂಡ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.