ಗದ್ದಲ, ಗೊಂದಲ, ಧರಣಿ ಸದನ ಮುಂದಕ್ಕೆ

ಬಿಎಂಎಸ್ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ವಿಧಾನ ಸಭೆ ಅಧಿವೇಶನದಲ್ಲಿಂದು ಜೆಡಿಎಸ್ ಶಾಸಕರು ಭಿತ್ತಿ ಪತ್ರ ಹಿಡಿದು ಧರಣಿ ನಡೆಸಿದರು.

ಬೆಂಗಳೂರು, ಸೆ. ೨೩- ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನ ಅಕ್ರಮಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಭಾಗಿಯಾಗಿದ್ದಾರೆ. ಅವರು ರಾಜೀನಾಮೆ ನೀಡಬೇಕು ಹಾಗೂ ಈ ಬಗ್ಗೆ ಸಿಬಿಐ ಇಲ್ಲವೇ ಸಿಓಡಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಸದಸ್ಯರು ಇಂದೂ ಸಹ ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿದ್ದರಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಗಿ ಯಾವುದೇ ಕಲಾಪಗಳು ನಡೆಯದೇ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವಂತಾಯಿತು.ಇಂದು ಜೆಡಿಎಸ್ ಸದಸ್ಯರ ಧರಣಿಯನ್ನು ಅಂತ್ಯಗೊಳಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಕೊಠಡಿಯಲ್ಲಿ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಸದನ ನಾಯಕರುಗಳ ಸಂಧಾನ ಸಭೆ ನಡೆಸಿದರು. ಈ ಸಂಧಾನ ಸಭೆಯಲ್ಲಿ ತನಿಖೆಗೆ ಸರ್ಕಾರ ಒಪ್ಪಲಿಲ್ಲ. ಜೆಡಿಎಸ್ ಸಹ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಹೀಗಾಗಿ ಸಂಧಾನ ಸಭೆ ಫಲಪ್ರದವಾಗದೆ ಅಧಿವೇಶನದ ಕೊನೆಯ ದಿನ ಸುಗಮ ಕಲಾಪಗಳು ನಡೆಯದಂತಾದವು. ಗದ್ದಲ ಕೋಲಾಹಲಗಳ ನಡುವೆಯೇ ಸದನವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಯಿತು.
ಸದನ ಆರಂಭವಾಗುತ್ತಿದ್ದಂತೆಯೇ ಜೆಡಿಎಸ್ ಸದಸ್ಯರು ನಿನ್ನೆಯಿಂದ ಸದನದಲ್ಲಿ ನಡೆಸಿದ್ದ ಧರಣಿಯನ್ನು ಇಂದೂ ಮುಂದುವರೆಸಿ ಘೋಷಣೆಗಳನ್ನು ಕೂಗಿ, ಬಿಎಂಎಸ್ ಶಿಕ್ಷಣ ಸಂಸ್ಥೆಯ ಹಗರಣದ ಬಗ್ಗೆ ತನಿಖೆಗೆ ಪಟ್ಟು ಹಿಡಿದು ಘೋಷಣೆಗಳನ್ನು ಹಾಕ ತೊಡಗಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧರಣಿ ಕೈ ಬಿಡುವಂತೆ ಮನವಿ ಮಾಡಿದರಾದರೂ ಅದಕ್ಕೆ ಜೆಡಿಎಸ್‌ನವರು ಒಪ್ಪಲಿಲ್ಲ.
ಗದ್ದಲದಲ್ಲೇ ಮಾತನಾಡಿದ ಕುಮಾರಸ್ವಾಮಿ ಅವರು ತನಿಖೆ ನಡೆಸಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದಾಗ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರ ಗಂಭೀರದ್ದಾಗಿದೆ. ಜೆಡಿಎಸ್‌ನವರು ಧರಣಿ ನಡೆಸಿರುವುದರಿಂದ ನಾವು ಮಾತನಾಡಲು ಆಗುವುದಿಲ್ಲ. ಸದನವನ್ನು ೧೦ ನಿಮಿಷ ಮುಂದೂಡಿ, ನಿಮ್ಮ ಕೊಠಡಿಯಲ್ಲಿ ಸಭೆ ಕರೆದು ಸಂಧಾನ ಮಾಡಿ ಎಂದು ಸಲಹೆ ನೀಡಿದರು.ಇದಕ್ಕೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸಹಮತ ವ್ಯಕ್ತಪಡಿಸಿದಾಗ ಸಭಾಧ್ಯಕ್ಷರು ಸದನವನ್ನು ೧೦ ನಿಮಿಷಗಳ ಕಾಲ ಮುಂದೂಡಿ, ತಮ್ಮ ಕೊಠಡಿಯಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗುವಂತೆ ಸದನದ ವಿವಿಧ ಪಕ್ಷಗಳ ನಾಯಕರುಗಳಿಗೆ ಮನವಿ ಮಾಡಿದರು.ಸಭಾಧ್ಯಕ್ಷರ ಕೊಠಡಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಧಾನ ಸಭೆ ನಡೆಯಿತ್ತಾದರೂ ಜೆಡಿಎಸ್‌ನವರು ತನಿಖೆ ನಡೆಸಬೇಕು ಎಂಬ ಪಟ್ಟನ್ನು ಸಡಿಲಿಸಲಿಲ್ಲ. ಸರ್ಕಾರದವರು ತನಿಖೆ ನಡೆಸದಿರುವ ತೀರ್ಮಾನಕ್ಕೆ ಅಂಟಿಕೊಂಟಿದ್ದರಿಂದ ಸಂಧಾನ ವಿಫಲವಾಯಿತು.ಮತ್ತೆ ಸದನ ೧೨ ಗಂಟೆಗೆ ಸಮಾವೇಶಗೊಂಡಾಗ ಜೆಡಿಎಸ್ ಸದಸ್ಯರು ಧರಣಿಯನ್ನು ಮುಂದುವರೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಸಚಿವ ಅಶ್ವತ್ಥ್‌ನಾರಾಯಣನವರ ರಾಜೀನಾಮೆಗೆ ಆಗ್ರಹಿಸುವ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಧರಣಿಯನ್ನು ಮುಂದುವರೆಸಿದರು.ಧರಣಿ ಕೈ ಬಿಡುವಂತೆ ಸಭಾಧ್ಯಕ್ಷ ಕಾಗೇರಿ ಅವರು ಮನವಿ ಮಾಡಿದರೂ ಅದಕ್ಕೆ ಜೆಡಿಎಸ್‌ನವರು ಒಪ್ಪದೇ ಏರು ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿದಾಗ ಸದನದಲ್ಲಿ ಗದ್ದಲ, ಕಾವೇರಿದ ವಾತಾವರಣ ನಿರ್ಮಾಣವಾಯಿತು.ಗದ್ದಲದಲ್ಲೇ ಮಾತನಾಡಿದ ಕುಮಾರಸ್ವಾಮಿ ಅವರು ಬಿಎಂಎಸ್ ಶಿಕ್ಷಣ ಟ್ರಸ್ಟ್‌ನ ಅವ್ಯವಹಾರದ ಬಗ್ಗೆ ಸಿಬಿಐ ಇಲ್ಲವೇ ಸಿಓಡಿಯಿಂದ ತನಿಖೆಯಾಗಲೇ ಬೇಕು. ಇದು ನಮ್ಮ ಪಕ್ಷದ ನಿಲುವು ಎಂದು ಪುನರುಚ್ಚರಿಸಿದರು.ಸಚಿವ ಅಶ್ವತ್ಥ್‌ನಾರಾಯಣ ಮಾತನಾಡಿ, ಜೆಡಿಎಸ್‌ನವರು ಮಾಡಿರುವ ಆರೋಪ ಸುಳ್ಳು, ಆಧಾರ ರಹಿತ. ಎಲ್ಲವೂ ಕಾನೂನು ಪ್ರಕಾರವೇ ಆಗಿದೆ. ಸುಖಾ ಸುಮ್ಮನೆ ತಮ್ಮ ಹೆಸರಿಗೆ ಮಸಿ ಬಳಿಯಲು ಆರೋಪಗಳನ್ನು ಮಾಡುತ್ತಿದ್ದಾರೆ. ತನಿಖೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಈ ಹಂತದಲ್ಲಿ ಜೆಡಿಎಸ್ ಸದಸ್ಯರು ಘೋಷಣೆಗಳನ್ನು ಏರಿದ ಧ್ವನಿಯಲ್ಲಿ ಕೂಗ ತೊಡಗಿದರು. ಇದರಿಂದ ಸದನದಲ್ಲಿ ಗದ್ದಲ ಇನ್ನಷ್ಟು ಹೆಚ್ಚಾಯಿತು.ವಿಪಕ್ಷ ಸಿದ್ದರಾಮಯ್ಯನವರು ಮಾತನಾಡಿ, ನಾವು ಶೇ. ೪೦ ರಷ್ಟು ಕಮೀಷನ್ ಬಗ್ಗೆ ಮಾತನಾಡಲು ಬಯಸಿದ್ದೆವು. ಜೆಡಿಎಸ್‌ನವರು ಧರಣಿ ನಡೆಸುತ್ತಿದ್ದಾರೆ. ಸದನವನ್ನು ಸೋಮವಾರ ಒಂದು ದಿನ ನಡೆಸಿ ಎಂದು ಒತ್ತಾಯಿಸಿದರಾದರೂ ಅದಕ್ಕೆ ಸರ್ಕಾರ ಒಪ್ಪಲಿಲ್ಲ.ಈ ಹಂತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯನವರ ನಡುವೆ ಶೇ. ೪೦ ರಷ್ಟು ಕಮೀಷನ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.ಈ ಗದ್ದಲ, ಕೋಲಾಹಲದ ನಡುವೆಯೇ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪದ ಉತ್ತರಗಳನ್ನು ಮಂಡಿಸಿ ಗಮನ ಸೆಳೆಯುವ ಸೂಚನೆಗಳ ಉತ್ತರವನ್ನು ಮಂಡಿಸಿ, ಮುಖ್ಯಮಂತ್ರಿಗಳಿಂದ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಮಂಡನೆಯನ್ನು ಗದ್ದಲದಲ್ಲೇ ಮಾಡಿಸಿದರು. ನಂತರ ಮುಖ್ಯಮಂತ್ರಗಳು ಎಸ್ಸಿ. ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ಗದ್ದಲದಲ್ಲೇ ಹೇಳಿಕೆಯನ್ನು ಓದಿದರು. ನಂತರ ಸಭಾಧ್ಯಕ್ಷರು ನವರಾತ್ರಿಯ ಶುಭಕೋರಿ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.