ಗದ್ದಲ, ಗಲಾಟೆ ಮಧ್ಯೆ ಬಜೆಟ್‌ಗೆ ಅಸ್ತು

ಬೆಂಗಳೂರು, ಮಾ. ೨೪- ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ, ಧಿಕ್ಕಾರದ ಘೋಷಣೆ, ಗದ್ದಲ, ಕೋಲಾಹಲದ ನಡುವೆಯೇ ಈ ಸಾಲಿನ ಬಜೆಟ್‌ಗೆ ಅಂಗೀಕಾರ ಪಡೆಯಲಾಯಿತು.
ರಾಜ್ಯದ ಅಭಿವೃದ್ಧಿಗೆ ಸಾಲ ಮಾಡಿರುವ ಕ್ರಮವನ್ನು ಮುಖ್ಯ ಮಂತ್ರಿ ಯಡಿಯೂರಪ್ಪ ಸಮರ್ಥಿಸಿಕೊಂಡು ತುಪ್ಪ ತಿನ್ನಲು ಸಾಲ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿಯ ತನಿಖೆ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನಡೆಯಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಹಾಗೂ ತೇಜೋವಧೆ ವರದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆ ತಂದಿರುವ ಆರು ಸಚಿವರ ರಾಜಿನಾಮೆಗೆ ಆಗ್ರಹಿಸಿ, ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ನಡೆಸುತ್ತಿರುವ ಧರಣಿ ಮೂರನೇ ದಿನವಾದ ಇಂದೂ ಮುಂದುವರೆಯಿತು.
ಈ ಧರಣಿ, ಗದ್ದಲದ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ೨೦೨೧-೨೨ನೇ ಸಾಲಿನ ಮುಂಗಡ ಪತ್ರದ ಚರ್ಚೆಗೆ ಉತ್ತರ ನೀಡಿ, ಬಜೆಟ್‌ಗೆ ಅಂಗೀಕಾರ ಪಡೆದುಕೊಂಡರು.
ಸದನ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಧರಣಿಯನ್ನು ಮುಂದುವರೆಸಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧರಣಿ ಕೈಬಿಡಿ, ಮುಖ್ಯಮಂತ್ರಿಗಳು ಬಜೆಟ್‌ಗೆ ಉತ್ತರ ಕೊಡಬೇಕಿದೆ ಎಂದು ಮನವಿ ಮಾಡಿದರೂ ಅದಕ್ಕೆ ವಿರೋಧ ಪಕ್ಷದ ಸದಸ್ಯರು ಸ್ಪಂದಿಸಲಿಲ್ಲ. ಆಗ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡು ಪ್ರಶ್ನೋತ್ತರ ಮಂಡನೆಯಾಗಿದೆ ಎಂದು ಹೇಳಿ, ನಂತರ ಬಿಜೆಪಿಯ ರಘುಪತಿ ಭಟ್ ಅವರಿಗೆ ಸರ್ಕಾರಿ ಭರವಸೆಗಳ ಸಮಿತಿ ೯ನೇ ವರದಿ ಮಂಡಿಸಿದ ನಂತರ, ಸಭಾಧ್ಯಕ್ಷರು ಬಜೆಟ್ ಚರ್ಚೆ ಮುಗಿದಿದೆ ಎಂದು ಹೇಳಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಜೆಟ್ ಮೇಲೆ ಉತ್ತರ ನೀಡುವಂತೆ ಸೂಚಿಸಿದರು. ಅದರಂತೆ ಮುಖ್ಯಮಂತ್ರಿಗಳು ೨೦೨೦-೨೧ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ, ಈ ಸಾಲಿನ ಬಜೆಟ್ ಉತ್ತಮ ಬಜೆಟ್ ಆಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಸರ್ಕಾರ ಎಲ್ಲಾ ವರ್ಗದ ಹಿತವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ತೆರಿಗೆಗಳಿಲ್ಲದ ಬಜೆಟ್ ಮಂಡಿಸಿದೆ ಎಂದು ಹೇಳಿದರು.
ಮಹಿಳೆಯರ ದಿನಾಚರಣೆಯಂದು ಮಂಡನೆಯಾದ ಬಜೆಟ್‌ನಲ್ಲಿ ಮಹಿಳೆಯರ ಸಬಲೀಕರಣಕ್ಕೂ ಆದ್ಯತೆ ನೀಡಿದ್ದೇವೆ ಎಂದರು.
ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಸಕಾರಾತ್ಮಕ ಚಿಂತನೆಯೊಂದಿಗೆ ಸೊರಗಿದ ಆರ್ಥಿಕತೆಗೆ ಬಲ ತುಂಬುವ ಉದ್ದೇಶದಿಂದ ಈ ಮುಂಗಡ ಪತ್ರವನ್ನು ಸಿದ್ಧಪಡಿಸಿದ್ದೇವೆ ಎಂದರು.
ರಾಷ್ಟ್ರ ನಿರ್ಮಾಣ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಲು ಈ ಬಜೆಟ್ ಮೂಲಕ ಪ್ರೇರೇಪಿಸಲಾಗಿದೆ ಎಂದು ಅವರು ಹೇಳಿದರು.
ಈ ಬಜೆಟ್‌ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಒಂದಲ್ಲಾ ಒಂದು ಹೊಸ ಯೋಜನೆ ಪ್ರಕಟಿಸಲಾಗಿದೆ. ರಾಜ್ಯದ ಜನತೆ ವಿಶೇಷವಾಗಿ ಮಹಿಳೆಯರು, ರೈತಾಪಿ ವರ್ಗ, ಉದ್ಯಮಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಮುಂಗಡಪತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಮಾಧ್ಯಮಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದು ಹೇಳಿದರು.
ತಮ್ಮ ಮುಂಗಡ ಪತ್ರದಲ್ಲಿ ಯಾವುದೇ ಹೊಸ ತೆರಿಗೆ, ಸರ್ ಚಾರ್ಜ್, ಸೆಸ್ ಇತ್ಯಾದಿ ಹೊಸ ತೆರಿಗೆ ಹಾಕಿಲ್ಲ. ಆದರೆ ತೆರಿಗೆ ವಸೂಲಿ ಜಾಲದ ವಿಸ್ತರಣೆ, ಸರ್ಕಾರಿ ಸಾಲಗಳ ವಸೂಲಾತಿ, ತೆರಿಗೇತರ ಆದಾಯದ ಸಂಗ್ರಹಣೆಯಲ್ಲಿ ಹೆಚ್ಚಳ ಇತ್ಯಾದಿ ಕ್ರಮಗಳಿಗೆ ಸರ್ಕಾರ ಮುಂದಾಗಲಿದೆ. ಈ ದಿಸೆಯಲ್ಲಿ ಪೂರ್ವ ಸಿದ್ಧತೆಯೊಂದಿಗೆ ವ್ಯವಸ್ಥಿತ ಕಾರ್ಯತಂತ್ರ ಅನುಸರಿಸಲಾಗುವುದು ಎಂದರು.
ತುಪ್ಪ ತಿಂದಿಲ್ಲ
ವಿರೋಧ ಪಕ್ಷದ ನಾಯಕರು ಇದೊಂದು ಅಭಿವೃದ್ಧಿ ವಿರೋಧಿ ಬಜೆಟ್, ಜನವಿರೋಧಿ ಬಜೆಟ್, ರಾಜಸ್ವ ಕೊರತೆ ಬಜೆಟ್ ಎಂದೆಲ್ಲಾ ಟೀಕಿಸಿದ್ದಾರೆ. ಪ್ರಾಯಶಃ ವಿರೋಧ ಪಕ್ಷದ ನಾಯಕರು ಸಂದರ್ಭದ ಸೂಕ್ಷ್ಮತೆಯನ್ನು ಅರಿತು ಸಂವೇದನಾಶೀಲತೆಯಿಂದ ಮಾತನಾಡಿದ್ದರೆ, ವಾಸ್ತವ ಚಿತ್ರಣ ದೊರೆಯಬಹುದಿತ್ತು. ಸಾಲ ಮಾಡದೆ ಯಾವ ಸರ್ಕಾರಗಳು ಯೋಜನೆಗಳ ಅನುಷ್ಠಾನ ಮಾಡಿದ ಉದಾಹರಣೆಗಳಿಲ್ಲ. ಸಮೃದ್ಧಿಯ ಸಂದರ್ಭಗಳಲ್ಲಿ ಸರ್ಕಾರಗಳು ಸಾಲ ಮಾಡಿರುವಾಗ ಸಾಂಕ್ರಾಮಿಕದಂತಹ ಸಂಕಷ್ಟ, ಪ್ರವಾಹ, ಮತ್ತಿತರ ಪ್ರಕೃತಿ ವಿಕೋಪ ಸೃಷ್ಟಿಸಿದ ಪ್ರತೀಕೂಲ ಪರಿಸ್ಥಿತಿಯಲ್ಲಿ ಸಾಲ ಮಾಡದೆ ಅಭಿವೃದ್ಧಿ ಕೈಗೊಳ್ಳುವುದು ಹೇಗೆ ಸಾಧ್ಯ? ಆರ್ಥಿಕತೆಗೆ ಚೈತನ್ಯ ನೀಡಲು ಹೇಗೆ ಸಾಧ್ಯ? ನಾವೇನು ಸಾಲ ಮಾಡಿ ತುಪ್ಪ ತಿಂದಿಲ್ಲ ಅಥವಾ ಮೋಜಿಗಾಗಿ ಔತಣ ನಡೆಸಲು ಸಾಲದ ಹಣ ಬಳಸಿಲ್ಲ ಎಂದು ತಿರುಗೇಟು ನೀಡಿ, ಸಾಲ ಮಾಡಿರುವುದನ್ನು ಸಮರ್ಥಿಸಿಕೊಂಡರು.
ಸಾಂಕ್ರಾಮಿಕದಿಂದ ಜನರ ಜೀವ ರಕ್ಷಣೆ ಮಾಡಲು ಮತ್ತು ಪ್ರಕೃತಿ ವಿಕೋಪ ತಂದಿಟ್ಟ ಸಂಕಷ್ಟಗಳ ನಿವಾರಣೆಗಾಗಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಅಭಿವೃದ್ಧಿ ಚಕ್ರವನ್ನು ಚಾಲನೆಯಲ್ಲಿ ಇರಿಸಿಕೊಳ್ಳಲು ಸಾಲ ಮಾಡಿರುವ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರ ಕೂಡ ೨೦೨೧-೨೨ನೇ ಸಾಲಿಗೆ ರಾಜ್ಯಗಳಿಗೆ ಜಿಎಸ್‌ಡಿಪಿಯ ಶೇ. ೪ರವರೆಗೆ ಸಾಲ ಪಡೆಯಲು ಅನುಮತಿ ನೀಡಿದೆ. ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ೨೦೦೨ಕ್ಕೆ ತಿದ್ದುಪಡಿ ಮಾಡಿ ಈ ಅವಕಾಶವನ್ನು ಬಳಸಿಕೊಳ್ಳಲಾಗುವುದು ಎಂದರು.
ಸಹಜವಾಗಿ ಆರ್ಥಿಕತೆಯ ಸ್ಥಗಿತದಿಂದಾಗಿ ಜಿಡಿಪಿ ಬೆಳವಣಿಗೆ ಕುಂಠಿತಗೊಂಡಿದೆ. ತೆರಿಗೆ ಸಂಗ್ರಹಣೆಯಲ್ಲಿ ಕೊರತೆ ಉಂಟಾಗಿದೆ. ಆದರೂ ಬದ್ಧ ವೆಚ್ಚಗಳ ನಿರ್ವಹಣೆ ಜತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಕೈಗೊಂಡಿದ್ದೇವೆ ಎಂದರು.
೨೦೨೦-೨೧ನೇ ಸಾಲಿನ ಆಯವ್ಯಯದ ಅಂದಾಜಿಗೆ ಎದುರಾಗಿ ಶೇ. ೯೪ ರಷ್ಟು ವೆಚ್ಚವನ್ನು ಸಾಧಿಸುವ ಭರವಸೆ ತಮಗಿದೆ. ಈ ಮೊದಲು ಇದು ಶೇ. ೮೫ ರಷ್ಟಾಗಬಹುದು ಎಂದು ಅಂದಾಜು ಮಾಡಲಾಗಿತ್ತು ಎಂದರು.
ಹಿಂದಿನ ತಿಂಗಳುಗಳಲ್ಲಿ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದ್ದರ ಫಲ ಮತ್ತು ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿದ ಕಾರಣ ಇದು ಸಾಧ್ಯವಾಗಿದೆ. ಆದರೂ ಕೂಡ ಹತ್ತು ತಿಂಗಳ ಕಾಲ ನಿಸ್ತೇಜನಗೊಂಡಿದ್ದ ಆರ್ಥಿಕತೆ ಕೇವಲ ಮೂರು ತಿಂಗಳಲ್ಲಿ ಪರಿಪೂರ್ಣವಾಗಿ ಚೇತರಿಸಿಕೊಳ್ಳಲು ಸುಲಭ ಸಾಧ್ಯವಲ್ಲ. ಕಳೆದ ತ್ರೈಮಾಸಿಕದಲ್ಲಿ ಕಂಡ ಚೇತರಿಕೆಯಿಂದಾಗಿ ಭರವಸೆಯ ಆಶಾಕಿರಣ ಕಂಡಿದೆ ಎಂದರು.
ಕಳೆದ ವರ್ಷ ಅನುಭವಿಸಿದ ಕಷ್ಟ-ನಷ್ಟಗಳು ಮರುಕಳುಹಿಸದಂತೆ ನೋಡಿಕೊಳ್ಳುವ ಜತೆಗೆ ಅಭಿವೃದ್ಧಿ ಚಕ್ರ ೨೦೨೧-೨೨ ನೇ ಸಾಲಿನ ಆರ್ಥಿಕ ವರ್ಷವಿಡೀ ಚಲನೆಯಲ್ಲಿರುವಂತೆ ನೋಡಿಕೊಳ್ಳುವ ಹೊಣೆ ನಮ್ಮದು. ೨೦೨೧-೨೨ ನೇ ಸಾಲಿನ ಮುಂಗಡ ಪತ್ರ ಯಶಸ್ವಿಯಾಗಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇಡೀ ಜಗತ್ತೆ ಸಾಂಕ್ರಾಮಿಕ ಕೊರೊನಾ ಸಾಂಕ್ರಾಮಿಕ ಅನಿರೀಕ್ಷಿತವಾಗಿ ಬಂದೆರಗಿದಾಗ ಯಾವುದೇ ಸರ್ಕಾರದ ಬಳಿ ದಿಢೀರ್ ಎಂದು ಪರಿಹಾರ ನೀಡಲು ಯಾವುದೇ ಮಂತ್ರದಂಡ ಇರುವುದಿಲ್ಲ ಅಥವಾ ಸರ್ಕಾರದ ಬೊಕ್ಕಸ ಅಕ್ಷಯ ಪಾತ್ರೆಯೇನಲ್ಲ, ಇದು ಪ್ರತಿಪಕ್ಷದವರಿಗೆ, ಆಡಳಿತಪಕ್ಷದವರಿಗೆ ಎಲ್ಲರಿಗೂ ತಿಳಿದ ವಿಚಾರ ಎಂದರು.
ವಿರೋಧ ಪಕ್ಷಗಳು ಆರೋಪಿಸುವಂತೆ ಯಾವುದೇ ವಿಚಾರಗಳನ್ನು ಬಜೆಟ್‌ನಲ್ಲಿ ಮುಚ್ಚಿಲ್ಲ. ಮುಂಗಡ ಪತ್ರ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆ ದಾಖಲೆಗಳಲ್ಲ,ಎಲ್ಲಾ ವಿಚಾರಗಳನ್ನು ವಿವರವಾಗಿ ಹಂಚಿಕೊಳ್ಳಲಾಗಿದೆ ಎಂದರು.
ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ ೨೦೦೨ ರಲ್ಲಿ ಜಾರಿಯಾದ ಮೇಲೆ ರಾಜಸ್ವ ಮಿಗತೆ ಬಜೆಟ್ ಪತ್ರವನ್ನು ಆಯಾ ಕಾಲದ ಸರ್ಕಾರಗಳು ಮಂಡಿಸಿವೆ. ನಾನು ಕೂಡ ಈವರೆಗೆ ಮಂಡಿಸಿದ ೮ ಮುಂಗಡ ಪತ್ರಗಳ ಪೈಕಿ ೭ ಮುಂಗಡ ಪತ್ರಗಳು ರಾಜಸ್ವ ಮಿಗತೆ (ರೆವಿನ್ಯೂ ಸರ್‌ಪ್ಲಸ್) ಪತ್ರಗಳಾಗಿದ್ದವು. ಆದರೆ ಇದು ದುರ್ಬರ ಸನ್ನಿವೇಶದಲ್ಲಿ ರಾಜಸ್ವ ಮಿಗತೆ ಈ ಬಜೆಟ್‌ನಲ್ಲಿ ಸಾಧ್ಯವಾಗಿಲ್ಲ. ಇದು ಸಂಕಷ್ಟದ ಸನ್ನಿವೇಶದ ಪರಿಣಾಮವಾಗಿದೆ. ಇದನ್ನು ಸರಿಪಡಿಸಲು ಪೂರಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಸಾಲಿನ ಆಯವಯ ಒಟ್ಟು ಗಾತ್ರ ೨,೪೬,೨೦೭೮ ಕೋಟಿ ರೂ.ಗಳಾಗಿದೆ. ಈ ಮೊತ್ತವು ೨೦೨೦-೨೧ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ ಶೇ. ೩.೫ ರಷ್ಟು ಹೆಚ್ಚಾಗಿದೆ. ಇದರಲ್ಲಿ ರಾಜ್ಯಸ್ವ ವೆಚ್ಚ ೧,೮೭,೪೦೫ ಕೋಟಿ ರೂ.ಗಳು ಮತ್ತು ಬಂಡವಾಳ ವೆಚ್ಚ ೪೪,೨೩೭ ಕೋಟಿ ರೂ. ಹಾಗೂ ಸಾರ್ವಜನಿಕ ಋಣ ೧೪,೫೬೫ ಕೋಟಿ ರೂ.ಗಳಾಗಿರುತ್ತವೆ ಎಂದು ಬಜೆಟ್ ಬಗ್ಗೆ ವಿವರ ನೀಡಿದರು.
ಸರ್ವರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್‌ಗೆ ಮುಖ್ಯಮಂತ್ರಿಗಳು ಅನುಮೋದನೆ ಕೋರಿ, ವಿವಿಧ ಇಲಾಖೆಗಳ ಬೇಡಿಕೆಗಳ ಅನುದಾನ ಬೇಡಿಕೆಗಳಿಗೂ ಸದನದ ಅಂಗೀಕಾರ ಕೋರಿದರು. ನಂತರ ಸಭಾಧ್ಯಕ್ಷರು ಮುಖ್ಯಮಂತ್ರಿಗಳ ಬೇಡಿಕೆಗಳನ್ನು ಸದನದ ಅಂಗೀಕಾರಕ್ಕೆ ಹಾಕಿದಾಗ ಸದನ ದ್ವನಿಮತದಿಂದ ಬಜೆಟ್ ಮತ್ತು ವಿವಿಧ ಇಲಾಖೆಗಳ ಅನುದಾನ ಬೇಡಿಕೆಗೆ ಒಪ್ಪಿಗೆ ನೀಡಿತು.
ಬಜೆಟ್‌ಗೆ ಸದನದಲ್ಲಿ ಅಂಗೀಕಾರ ದೊರೆತಿದೆ ಎಂದು ಸಧ್ಯಕ್ಷರು ಹೇಳಿದರು.
ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆಯೇ ಮುಖ್ಯಮಂತ್ರಿಗಳು ಸುಮಾರು ೪೦ ನಿಮಿಷಗಳ ಕಾಲ ಬಜೆಟ್ ಉತ್ತರ ನೀಡಿದ್ದು ವಿಶೇಷವಾಗಿತ್ತು.