ಗದಗ: ಪತ್ರಿಕಾ ದಿನಾಚರಣೆ

(ಸಂಜೆವಾಣಿ ವಾರ್ತೆ)
ಗದಗ,ಜು17: ಜಿಲ್ಲೆ, ರಾಜ್ಯ, ರಾಷ್ಟ್ರದ ಬದಲಾವಣೆಗೆ ಕಾರಣವಾಗುವಂತಹ ಸುದ್ದಿಗಳು ಕೂಡ ಇಂದು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳ್ಳುತ್ತಿರುವುದು ವಿಷಾದನೀಯ. ಮಹತ್ವದ ಸುದ್ದಿಗಳನ್ನು ಎಲ್ಲ ಆವೃತ್ತಿಯಲ್ಲಿ ಪ್ರಕಟಿಸುವ ನಿಟ್ಟಿನಲ್ಲಿ ಪತ್ರಿಕೆಗಳು ಯೋಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶ್ರೀನಿವಾಸ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ `ಅವ್ವ’ ಟ್ರಸ್ಟ್‍ನವರು ಸ್ಥಾಪಿಸಿರುವ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜನಕಲ್ಯಾಣ ಮಾಡುತ್ತಿರುವ ಜನಸೇವಕರು, ಬೆಳೆಯುತ್ತಿರುವ ನಾಯಕರು,ಕಲಾವಿದರು, ಸಂಗೀತಗಾರರು, ಕ್ರೀಡಾಪಟುಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಕೇವಲ ಜಿಲ್ಲೆಗೆ ಸೀಮಿತಗೊಳಿಸುತ್ತಿರುವುದರಿಂದ ಅನ್ಯಾಯವಾಗುತ್ತಿದೆ. ಸ್ಥಳೀಯವಾಗಿ ನಡೆದ ಸುದ್ದಿಗಳನ್ನು ರಾಜ್ಯ ಮಟ್ಟದಲ್ಲಿ ಬಿತ್ತರಿಸುವಂತಾದಾಗ ಹೆಸರು ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪತ್ರಿಕೋದ್ಯಮ ಮತ್ತು ಸ್ವಾತಂತ್ರ್ಯ, ಪತ್ರಿಕೋದ್ಯಮ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಯುವ ಪತ್ರಕರ್ತರಿಗೆ ಪತ್ರಿಕೋದ್ಯಮದ ತಿಳಿವಳಿಕೆ ನೀಡಬೇಕು.ಯಾವುದು ಸತ್ಯ, ಯಾವುದು ಅಸತ್ಯ, ಯಾವುದು ಸಮಾಜಕ್ಕೆ ಒಳ್ಳೆಯದನ್ನು ಗುರುತಿಸಿ ಓದುಗರಿಗೆ ಸುದ್ದಿಯನ್ನು ಕೊಡಬೇಕು ಎಂದು ತಿಳಿಸಿದರು.

ಅವ್ವ ಸೇವಾ ಟ್ರಸ್ಟ್‍ನ ಸಂಚಾಲಕ ಡಾ. ಬಸವರಾಜ ಧಾರವಾಡ ಮಾತನಾಡಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ತಾಯಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಸ್ಮರಣಾರ್ಥ ಸ್ಥಾಪಿಸಿರುವ `ಅವ್ವ ಸೇವಾ ಟ್ರಸ್ಟ್’ ಕಳೆದ 13 ವರ್ಷಗಳಿಂದ ವಿವಿಧ ರಚನಾತ್ಮಕ ಕಾರ್ಯಗಳ ಮೂಲಕ ಸಮಾಜ ಸೇವೆಗೆ ಸಮರ್ಪಿಸಿಕೊಂಡಿದೆ. ಅದೇ ಮಾದರಿಯಲ್ಲಿ ಅವ್ವ ಸೇವಾ ಟ್ರಸ್ಟ್ ಮೂಲಕ ಸ್ಥಾಪಿಸಿರುವ ದತ್ತಿನಿಧಿಯಲ್ಲಿ ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಶ್ಮಿ ಎಸ್. ಅವರಿಗೆ ನೀಡಿರುವ ಮೊದಲ ಪ್ರಶಸ್ತಿ ಉತ್ತಮ ಆಯ್ಕೆಯಾಗಿದೆ’ ಎಂದು ತಿಳಿಸಿದರು.
ಅವ್ವ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತೆ ರಶ್ಮಿ ಎಸ್. ಮಾತನಾಡಿ, ಮಾಧ್ಯಮ ಅಕಾಡೆಮಿ ಮತ್ತು ಸರ್ಕಾರ ಮಾಡದಿರುವ ಕೆಲಸವನ್ನು ಅವ್ವ ಸೇವಾ ಟ್ರಸ್ಟ್ ಇಂದು ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 80ಕ್ಕೂ ಅಧಿಕ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಾದ ಅನಘಾ ಬಿ. ಕುಲಕರ್ಣಿ, ಪ್ರಣವಸಿಂಗ್ ಜಮಾದಾರ, ಚಕ್ರವರ್ತಿ ಕಾಶೀನಾಥ ಬಿಳಿಮಗ್ಗದ, ಕೀರ್ತಿ ಸಂಗಪ್ಪ ಮೆಣಸಗಿ, ಸ್ವಾತಿ ಎಸ್. ಕುಷ್ಟಗಿ, ಆದರ್ಶ ಸಿ. ಗಣಪ್ಪನವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಎಂ. ಶರೀಫನವರ್, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಕುದರಿಮೋತಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಸಂಘದ ಪತ್ರಕರ್ತರಾದ ಅಜಿತ್ ಹೊಂಬಾಳಿ, ಸಲೀಂ ಬಳಬಟ್ಟಿ, ಗಣೇಶ ಪೈ, ಛಾಯಾಗ್ರಾಹಕರಾದ ಶಂಕರ ಗುರಿಕಾರ, ಲಕ್ಷ್ಮಣ ವಗ್ಗಿ, ರಾಮಣ್ಣ ವಗ್ಗಿ ಸೇರಿ ಅನೇಕರು ಇದ್ದರು. ಆನಂದಯ್ಯ ವಿರಕ್ತಮಠ ನಿರೂಪಿಸಿದರು. ಶಿವಕುಮಾರ ಕುಷ್ಟಗಿ ಸ್ವಾಗತಿಸಿದರು.