ಗದಗ ಜಿಲ್ಲೆ: ಹದಗೆಟ್ಟ ರಸ್ತೆಗಳಿಗೆ ಮುಕ್ತಿ ಎಂದು?


ಗದಗ, ನ 28: ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿ ಆಡಳಿತ ಕೇಂದ್ರದ ಹೃದಯ ಭಾಗ ಸೇರಿದಂತೆ ಗದಗ, ಶಿರಹಟ್ಟಿ, ಮುಂಡರಗಿ, ರೋಣ, ನರಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ ಸೇರಿದಂತೆ ಪ್ರತಿಯೊಂದು ನಗರ, ಪಟ್ಟಣ, ಗ್ರಾಮಗಳಲ್ಲಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿ.ಮು. ತಾ.ಮು ಮುಖ್ಯ ರಸ್ತೆ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿರುವುದಲ್ಲದೇ, ಗ್ರಾಮೀಣ ಭಾಗಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳು ರಸ್ತೆಗಳು ಹದಗೆಟ್ಟು ಹೋಗಿರುವುದರಿಂದ ನಿತ್ಯ ರಸ್ತೆಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ರಸ್ತೆಯಲ್ಲಿ ಬಿದ್ದಿರುವ ತಗ್ಗು ದಿನ್ನಿಗಳು ಮತ್ತು ಧೂಳಿನಿಂದ ಬೇಸತ್ತು ಜನಪ್ರತಿನಿಧಿಗಳಿಗೆ, ಸಚಿವರಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಜಿಲ್ಲೆಯ ಜನತೆಗೆ ರಸ್ತೆಗಳ ಅಭಿವೃದ್ಧಿ ಬಗ್ಗೆ ಚಿಂತೆಯಾಗಿದ್ದರೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳು ಹಣ ಲೂಟಿ ಮಾಡುವ ಚಿಂತೆ.
ಗದಗ ಜಿಲ್ಲೆಯ ಮುಖ್ಯ ರಸ್ತೆಗಳು ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟಿರುತ್ತವೆ. ಬೇಸಗೆ ದಿಗಳಲ್ಲಿ ಧೂಳುವಾಗಿರುತ್ತವೆ. ಇದರಿಂದ ವಾಹನ ಸವಾರರ ಜೀವನಕ್ಕೆ ಸಂಚಕಾರ ತರುವಂತಾಗಿದೆ. ರಸ್ತೆ ದುರಸ್ತಿ ಕಾಣದೇ ಸಾಕಷ್ಟು ದಿನ ಕಳದಿವೆ. ಸಾವಿರಾರು ವಾಹನಗಳು ಈ ರಸ್ತೆಗಳ ಮೇಲೆ ನಿತ್ಯ ಸಂಚಾರ ಮಾಡುತ್ತಿವೆ. ನಾಲ್ಕು ಚಕ್ರ ವಾಹನಗಳು ಈ ರಸ್ತೆಗಳಲ್ಲಿ ಬಂದರೆ ನಡುವೆ ವಾಹನ ಕೈ ಕೊಡುವುದು ಗ್ಯಾರಂಟಿ. ಕೆಲವೊಂದು ಬಾರಿ ಕೆಟ್ಟು ನಿಂತಿವೆ. ಇದರ ನಡುವೆ ಬೈಕ್ ಸವಾರರ ಸ್ಥಿತಿ ದಯನೀಯವಾಗಿದೆ.
ಜಿಲ್ಲೆಯ ವಿವಿಧ ತಾಲೂಕಿನ ಜನರು ತಮ್ಮ ದೈನಂದಿನದ ಕಾರ್ಯ ಚಟುವಟಿಕೆಗಳಿಗಾಗಿ ನಗರ, ಪಟ್ಟಣ ಮತ್ತು ಇತರೆ ಗ್ರಾಮಗಳಿಗೆ ಸಂಚರಿಸಲು ಹದಗೆಟ್ಟ ರಸ್ತೆ ಮೂಲಕ ಹೋಗಬೇಕಿದೆ. ಬೇರೆ ಮಾರ್ಗವಿಲ್ಲದೇ ಅನಿವಾರ್ಯವಾಗಿ ಎಲ್ಲರೂ ಇದೇ ರಸ್ತೆ ಮೇಲೆ ಪ್ರಯಾಣ ಮಾಡಬೇಕು. ಮಕ್ಕಳು ವೃದ್ಧರು ಸೇರಿದಂತೆ ಗರ್ಭಿಣಿಯರು ಕೂಡ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಸ್ತೆ ಅಭಿವೃದ್ಧಿಗಳಿಗಾಗಿ ಕೋಟಿ ಕೋಟಿ ಅನುದಾನ ನೀಡತ್ತಿದ್ದರು, ನಮ್ಮ ಜಿಲ್ಲೆಯ ಪಿಡಬ್ಲುಡಿ ಸಚಿವರಾದ ಸಿ.ಸಿ. ಪಾಟೀಲ ಅವರಿಗೆ ಯಾಕೆ ನಮ್ಮ ಜಿಲ್ಲೆಯ ರಸ್ತೆಗಳು ಕಣ್ಣಿಗೆ ಕಾಣುತ್ತಿಲ್ಲ ಎಂಬುವುದು ಯಕ್ಷ ಪ್ರಶ್ನೆಯಾಗಿ ಜಿಲ್ಲೆಯ ಜನರಲ್ಲಿ ಕಾಡುತ್ತಿದೆ. ಸರ್ಕಾರಗಳಿಂದ ಅನುದಾನ ಬಂದಿದ್ದರು, ರಸ್ತೆಗಳ ಅಭಿವೃದ್ಧಿಗೆ ಜವಾಬ್ದಾರಿ ಹೊತ್ತಿರುವ ಇಲಾಖೆಯ ಅಧಿಕಾರಿಗಳು ಹಣ ದೋಚಲು ಪ್ರಯತ್ನ ಪಡುತ್ತಿದ್ದಾರಾ? ಎಂಬ ಆರೋಪ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.
ಈಗಾಗಲೇ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಮನವಿಗಳನ್ನು ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ರಾಮೀಣ ಭಾಗಗಳತ್ತ ಮುಖ ಮಾಡುವ ಜನಪ್ರತಿನಿಧಿಗಳಿಗೆ ಚುನಾವಣೆ ನಂತರ ಜನತೆಯ ಸಮಸ್ಯೆಗಳ ಬಗ್ಗೆ ಪ್ರಜ್ಞೆ ಇರುವುದಿಲ್ಲ ಎಂದು ಗ್ರಾಮೀಣ ಭಾಗದ ಜನತೆ ಆರೋಪಿಸಿದ್ದಾರೆ.
ಕೋಟ್ :
ಗದಗ ಜಿಲ್ಲೆಯ ಪ್ರತಿಯೊಂದು ತಾಲೂಕು ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳು ಮಳೆಯಿಂದಾಗಿ ಈಗಾಗಲೇ ಸಂಪೂರ್ಣವಾಗಿ ಹದಗೆಟ್ಟು, ರಸ್ತೆಯಲ್ಲಿ ತೆಗ್ಗು, ದಿನ್ನಿಗಳು ದೊಡ್ಡ ಪ್ರಮಾಣದಲ್ಲಿ ಬಿದ್ದಿವೆ. ಇವುಗಳನ್ನು ಸರಿ ಪಡಿಸಲು ನಾವುಗಳು ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳನ್ನು ಕೈಗೊಂಡರು ಕೂಡ ನಮ್ಮ ಪಿಡಬ್ಲುಡಿ ಸಚಿವರಾದ ಸಿ.ಸಿ. ಪಾಟೀಲರು ಗಮನ ಹರಿಸುತ್ತಿಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರೋಣ ಮಾಜಿ ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.