ಗದಗ ಜಿಲ್ಲೆಯಾದ್ಯಂತ ಚಟುವಟಿಕೆ ನಿರ್ಬಂಧ

ಗದಗ ಮೇ 27 : ಗದಗ ಜಿಲ್ಲೆಯಲ್ಲಿ ಕೋರೊನಾ ಸೋಂಕು ತಡೆಯಲು ಮೇ 27 ರ ಬೆಳಿಗ್ಗೆ 10 ಗಂಟೆಯಿಂದ ಜೂನ 1 ರ ಬೆಳಿಗ್ಗೆ 6 ಗಂಟೆಯವರೆಗೆ ನಿರ್ದಿಷ್ಟ ಚಟುವಟಿಕೆ ಹಾಗೂ ಸೇವೆಗಳಿಗೆ ಅವಕಾಶ ನೀಡಿ, ಇನ್ನುಳಿದ ಎಲ್ಲ ಚಟುವಟಿಕೆ ಹಾಗೂ ಜನರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾಧ್ಯಂತ ಕೋರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ಸಲುವಾಗಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವುದು ಹಾಗೂ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಕೆಳಗಿನಂತೆ ಕೆಲವು ಅಗತ್ಯ ಸೇವೆಗಳಿಳಿಗೆ ಅವಕಾಶ ನೀಡಿ, ಇನ್ನುಳಿದಂತೆ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಹೂ-ಹಣ್ಣು-ತರಕಾರಿಗಳ ವ್ಯಾಪಾರವನ್ನು ತಳ್ಳುವ ಗಾಡಿ ಅಥವಾ ಆಟೋ ರಿಕ್ಷಾಗಳ ಮೂಲಕ ಖರೀದಿದಾರರ ಮನೆಗಳ ಓಣಿಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕಾ ಕ್ರಮವಹಿಸಿ ಮಾರಾಟ ಮಾಡಲು ಅನುಮತಿಸಿದೆ. ಎಲ್ಲ ದಿನಸಿ ಅಂಗಡಿಗಳ ವ್ಯಾಪಾರವನ್ನು ಮನೆಗೆ ಸರಬರಾಜು (ಹೊಂ ಡಿಲೇವರಿ) ಮುಖಾಂತರ ಮಾಡಲು ಅವಕಾಶ ನೀಡಿದೆ. ಹಾಲಿನ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ತೆರೆದು ವ್ಯವಹರಿಸಲು ಅವಕಾಶ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪರಿಕರಗಳು, ಯಂತ್ರೋಪಕರಣಗಳು, ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ರೀತಿಯ ಹೋಟೆಲ್‍ಗಳನ್ನು ಬಂದ್ ಮಾಡಬೇಕು. ವೈನ್ ಶಾಪ್, ಬಾರ್-ರೆಸ್ಟೋರೆಂಟ್‍ಗಳನ್ನು ತೆರೆಯಲು ಅನುಮತಿ ಇರುವುದಿಲ್ಲ. ಎಲ್ಲ ರೀತಿಯ ಮಾಂಸದ ಅಂಗಡಿಗಳನ್ನು ಮುಚ್ಚುವುದು. ಬ್ಯಾಂಕ್ ಮತ್ತು ಅಂಚೆ ಕಛೇರಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸೇರದಂತೆ ಕನಿಷ್ಟ ಸಿಬ್ಬಂದಿಗಳೊಂದಿಗೆ ಸೇವೆಗಳನ್ನು ಕೈಗೊಳ್ಳಲು ಅನುಮತಿ. ಈ ಮೊದಲೇ ಅನುಮತಿ ಪಡೆದ ಮದುವೆ ಕಾರ್ಯಕ್ರಮಕ್ಕೆ ಅನುಮತಿಸಿದೆ. ಕೋವಿಡ್ ಮಾರ್ಗಸೂಚಿಯನ್ವಯ 05 ಜನಕ್ಕೆ ಮೀರದಂತೆ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿದ್ದಾರೆ.
ಈ ಆದೇಶವು ಕೋವಿಡ್-19 ಕಾರ್ಯನಿರತ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸರ್ಕಾರಿ ವಾಹನಗಳ ಓಡಾಟಕ್ಕೆ ಅನ್ವಯಿಸುವುದಿಲ್ಲ. ಈ ಆದೇಶವನ್ನು ಸಬಂಧಿಸಿದ ಎಲ್ಲ ಇಲಾಖಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.