ಗಣೇಶ ವಿಸರ್ಜನೆ ವ್ಯವಸ್ಥೆ ಕಲ್ಪಿಸಲು ಮನವಿ

ಬೆಂಗಳೂರು, ಆ.೨೯- ಈ ಬಾರಿ ಗಣೇಶೋತ್ಸವ ಸಾಮೂಹಿಕ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಂಚಾರ, ಬೀದಿ ದೀಪಾ ಸೇರಿದಂತೆ ಬಿಬಿಎಂಪಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಮನವಿ ಸಲ್ಲಿಸಿದೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಸಮಿತಿಯ ಪ್ರಮುಖರು ಸಭೆ ನಡೆಸಿ ಗಣೇಶೋತ್ಸವ ಕುರಿತು ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಪ್ರಮುಖರಾದ ಪ್ರಕಾಶ್ ರಾಜು,
ಗಣೇಶೋತ್ಸವ ಸಿದ್ದತೆ ಕುರಿತು ಬಿಬಿಎಂಪಿಯ ಮುಖ್ಯ ಆಯುಕ್ತರು ಹಾಗು ವಲಯ ಆಯುಕ್ತರ ಜೊತೆ ಸಭೆ ಮಾಡಲಾಗಿದೆ. ಮೆರವಣಿಗೆ ವಿಚಾರವಾಗಿ ಅವರಿಗೆ ಮಾಹಿತಿ ನೀಡಲಾಗಿದೆ ಎಂದರು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆ ದುರಸ್ತಿ, ಗಣೇಶ ವಿಸರ್ಜನೆ ವಿಚಾರವಾಗಿ ಕೆರೆ ಹಾಗು ಕಲ್ಯಾಣಿಗಳ ಅಭಿವೃದ್ಧಿ ಕುರಿತು ಮಾಹಿತಿ ನೀಡಲಾಗಿದೆಈ ಬಾರಿ ಹೆಬ್ಬಾಳ, ಸ್ಯಾಂಕಿ ಟ್ಯಾಂಕ್, ಹಲಸೂರು ಹಾಗು ಯಡಿಯೂರು ಕೆರೆಯಲ್ಲಿ ಕ್ರೇನ್ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

ನಮ್ಮ ಸಮಿತಿ ಪ್ರತಿ ವರ್ಷ ಸಾಮೂಹಿಕ ಮೆರವಣಿಗೆ ಆಯೋಜಿಸುತ್ತದೆ. ಈ ವರ್ಷ ೨೪ ಕಡೆಗಳಲ್ಲಿ ಅದ್ದೂರಿ ಮೆರವಣಿಗೆ ಆಯೋಜಿಸಲಾಗಿದೆ. ಸೆಪ್ಟಂಬರ್ ೨ ರಿಂದ ೧೧ ರವರೆಗೂ ಆಯೋಜಿಸಲಾಗಿದೆ. ವಿಜೃಂಭಣೆಯಿಂದ ಈ ಶೋಭಯಾತ್ರೆ ನಡೆಯಲಿದೆ ಎಂದು ನುಡಿದರು.

ಪ್ರಮುಖವಾಗಿ ಸೆಪ್ಟೆಂಬರ್ ೪ ರಂದು ಅತಿ ಹೆಚ್ಚು ಮೆರವಣಿಗೆಗಳು ನಡೆಯಲಿವೆ. ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆ ಮಹಾಪುರುಷರ ಸ್ಮರಣೆ ಆಗಲಿದೆ. ಮೆರವಣಿಗೆಗಳಿಗಾಗಿಯೇ ಟ್ಯಾಬ್ಲೂ ಸಿದ್ದತೆಗೊಂಡಿದೆ. ಸಾವರ್ಕರ್ ಸಂಬಂಧಿಸಿದಂತೆ ಅವರ ಜೀವನದ ಪ್ರರಿಚಯ ಮಾಡಿಕೊಡಲಾಗುತ್ತೆ ಎಂದರು.