ಗಣೇಶ ವಿಸರ್ಜನೆ ವೇಳೆ ಪ್ರಚೋದನಕಾರಿ ಹಾಡು: ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ,ಸೆ.13: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮೆಹಬಾಸ್ ಮಸೀದಿ ಬಳಿ ಪ್ರಚೋದನಕಾರಿ ಹಾಡು ಹಾಕಿ ನೃತ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಗಣೇಶ ಮಂಡಳಿಯ ನಾಲ್ವರ ವಿರುದ್ಧ ಪೋಲಿಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ 10ರಂದು ರಾತ್ರಿ ಬೋವಿ ಸಮಾಜದ ಗಣೇಶ ವಿಸರ್ಜನೆ ವೇಳೆ ನಗರದ ಸೂಪರ್ ಮಾರ್ಕೆಟ್ ಮೆಹಬಾಸ್ ಮಸೀದೆ ಬಳಿ ತುಮಾರಿ ಔಕಾತ್ ಬತಾದೇಂಗೆ ಅನ್ನೋ ಹಾಡು ಹಾಕಿ ಯುವಕರು ನೃತ್ಯ ಮಾಡಿದ್ದರು. ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ನಂತರ ಬಿಜೆಪಿ ಮುಖಂಡ ಚಂದು ಪಾಟೀಲ್ ಟ್ವೀಟ್‍ನಲ್ಲಿ ಕಾನೂನು ಉಲ್ಲಂಘಿಸಲ್ಲ ಎಂದು ಬರೆದುಕೊಂಡಿದ್ದರು. ಆದಾಗ್ಯೂ, ಮೆರವಣಿಗೆಯಲ್ಲಿ ಭಾರೀ ಸೌಂಡ್ ಇಟ್ಟು ನೃತ್ಯ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಚೋದನಕಾರಿ ಹಾಡು ಹಾಕಿ ಶಾಂತಿ ಕದಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್‍ಡಿಪಿಐ ಮುಖಂಡ ಅಲೀಮ್ ಇಲಾಹಿ ಅವರು ಆಗ್ರಹಿಸಿದ್ದಾರೆ.
ಇದೀಗ ಪೋಲಿಸರು ಬೋವಿ ಸಮಾಜ ಗಣೇಶೋತ್ಸವ ಮಂಡಳಿ ಅಧ್ಯಕ್ಷ ತುಕಾರಾಂ ಮಹೇಂದ್ರಕರ್, ಅಂಬರೀಷ್ ಭೋವಿ, ಡಿಜೆ ಮಾಲಿಕ ಸೊಲ್ಲಾಪುರ ಸಲೀಮ್ ಸೇರಿ ನಾಲ್ವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಒಂದು ಸಮುದಾಯದ ಭಾವನೆಗೆ ಆಘಾತವುಂಟು ಮಾಡುವ ಉದ್ದೇಶದಿಂದ ಹಾಡು ಹಾಕಲಾಗಿದ್ದು, ಜೊತೆಗೆ ಪರವಾನಿಗೆ ಇಲ್ಲದೇ ಡಿಜೆ ಬಳಕೆ ಮಾಡಲಾಗಿದೆ ಎಂದು ನಗರದ ಬ್ರಹ್ಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.