ಗಣೇಶ ವಿಸರ್ಜನೆ: ನಗರದಾದ್ಯಂತ ಮದ್ಯ ಮಾರಾಟನಿಷೇಧಿಸಿ ನಗರ ಪೊಲೀಸ್ ಆಯುಕ್ತರ ಆದೇಶ

ಕಲಬುರಗಿ.ಸೆ.19:ಕಲಬುರಗಿ ನಗರದಲ್ಲಿ ಇದೇ ಸೆಪ್ಟೆಂಬರ್ 20 ರಂದು ಹಿಂದು ಮಹಾ ಗಣಪತಿ ಸಮಿತಿಯ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟನಲ್ಲಿ ಇದೇ ಸೆಪ್ಟೆಂಬರ್ 20ರ ಬೆಳಿಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಕಲಬುರಗಿ ನಗರದಾದ್ಯಂತಹ ಎಲ್ಲಾ ತರಹದ ಮದ್ಯಮಾರಾಟ ಹಾಗೂ ಮದ್ಯ ಸಾಗಾಟವನ್ನು ನಿಷೇಧಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ವೈ.ಎಸ್. ರವಿಕುಮಾರ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ನಗರದಾದ್ಯಂತ 1965ರ ಕರ್ನಾಟಕ ಅಬಕಾರಿ ಕಾಯ್ದೆ ಕಲಂ 21(1) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 31ರನ್ವಯ ಮೇಲ್ಕಂಡ ದಿನದಂದು ಕಲಬುರಗಿ ನಗರದಾದ್ಯಂತ ಎಲ್ಲಾ ತರಹದ ಮದ್ಯ ಮಾರಾಟವನ್ನು ನಿಷೇಧಿಸಿ ಹಾಗೂ ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಸಹ ಮುಚ್ಚುವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರು ಈ ಅದೇಶವನ್ನು ಹೊರಡಿಸಿದ್ದಾರೆ.

ಅಬಕಾರಿ ಉಪ ಆಯುಕ್ತರು ಕಲಬುರಗಿ ನಗರ ಹಾಗೂ ಡಿಸಿಪಿ (ಕಾ-ಸು) ಕಲಬುರಗಿ ನಗರ ಹಾಗೂ ಅವರ ಅಧೀನ ಅಧಿಕಾರಿಗಳು, ಹೆಚ್ಚುವರಿ ಅಬಕಾರಿ ಅಧೀಕ್ಷಕರು ಕಲಬುರಗಿ ಇವರು ತಮ್ಮ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಅವರು ತಿಳಿಸಿದ್ದಾರೆ.