ಗಣೇಶ ವಿಸರ್ಜನೆ:ಮುಂಬೈನಲ್ಲಿ ಪೊಲೀಸ್ ಸರ್ಪಗಾವಲು

ಮುಂಬೈ,ಸೆ.೨೮- ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಗಣೇಶ ವಿಸರ್ಜನೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಿರಲು ಬರೋಬ್ಬರಿ ೧೯ ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಗಣೇಶ ಚತುರ್ಥಿ ೧೦-ದಿನಗಳ ಹಬ್ಬವಾಗಿದ್ದು, ಹಿಂದೂ ಚಂದ್ರನ ಕ್ಯಾಲೆಂಡರ್ ತಿಂಗಳ ’ಭಾದ್ರಪದ’ ನಾಲ್ಕನೇ ದಿನದಂದು ಪ್ರಾರಂಭವಾಗಿದ್ದು ಇಂದು ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ಇಂದು ಈದ್-ಇ-ಮಿಲಾದ್ ಇರುವ ಹಿನ್ನೆಲೆಯಲ್ಲಿ ಬಾರಿ ಸಂಖ್ಯೆಯಲ್ಲಿ ಭದ್ರತೆ ಒದಗಿಸಲಾಗಿದೆ. ಪೊಲೀಸರ ಮನವಿ ಮೇರೆಗೆ ಅನಂತ ಚತುರ್ದಶಿ ಪ್ರಯುಕ್ತ ಗುರುವಾರದ ಬದಲು ಈದ್-ಎ-ಮಿಲಾದ್ ಮೆರವಣಿಗೆ ನಡೆಸಲು ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ನಿರ್ಧರಿಸಿದ್ದಾರೆ.
ಭದ್ರತೆಗಾಗಿ ೧೬,೨೫೦ ಕಾನ್‌ಸ್ಟೆಬಲ್, ೨,೮೬೬ ಅಧಿಕಾರಿಗಳು, ೪೫ ಸಹಾಯಕ ಪೊಲೀಸ್ ಆಯುಕ್ತರು , ೨೫ ಉಪ ಪೊಲೀಸ್ ಆಯುಕ್ತರು , ೮ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗು ಇತರ ಹಿರಿಯ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಇದರ ಜೊತೆಗೆ ಹೆಚ್ಚುವರಿಯಾಗಿ, ರಾಜ್ಯ ಮೀಸಲು ಪೊಲೀಸ್ ಪಡೆ ಕ್ಷಿಪ್ರಕಾರ್ಯಾಚರಣೆ ಕ್ವಿಕ್ ರೆಸ್ಪಾನ್ಸ್ ಟೀಮ್‌ಗಳು ಮತ್ತು ಗೃಹ ರಕ್ಷಕರ ೩೫ ತುಕಡಿಗಳು ಮುಂಬೈ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
ಎಲ್ಲಾ ಪೊಲೀಸ್ ಸಿಬ್ಬಂದಿಯ ರಜೆ ರದ್ದುಗೊಳಿಸಲಾಗಿದೆ. ವೈದ್ಯಕೀಯ ರಜೆಯಲ್ಲಿರುವವರನ್ನು ಹೊರತುಪಡಿಸಿ ಉಳಿದೆಲ್ಲ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.