ಗಣೇಶ ಮೈದಾನದಲ್ಲಿ ಅಷ್ಟವಿನಾಯಕನಿಗೆ ಮೋದಕ ಸಮರ್ಪಣೆ

ಬೀದರ:ಸೆ.13: ನಗರದ ಗಣೇಶ ಮೈದಾನದಲ್ಲಿರುವ ಗಣೇಶ ಅಷ್ಟವಿನಾಯಕ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ ಆಚರಣೆ ಮಾಡಲಾಯಿತು. ತನ್ನಿಮಿತ್ತ ಅಷ್ಟವಿನಾಯಕನಿಗೆ ಮೋದಕ ಸಮರ್ಪಣೆ ಮಾಡಲಾಯಿತು. ಅಷ್ಟವಿನಾಯಕ ಮಹಿಳಾ ಮಂಡಳದ ವತಿಯಿಂದ ಪ್ರತೀ ವರ್ಷ ಬ್ರಹ್ಮೋತ್ಸವ ಆಚರಣೆ ಮಾಡಲಾಗುತ್ತಿದ್ದು, ಕಳೆದ ವರ್ಷ 56 ರೀತಿಯ ಭೋಜನ ಸಮರ್ಪಣೆ ಮಾಡಲಾಗಿತ್ತು, ಈ ಬಾರಿ ಮೋದಕ ಸಮರ್ಪಣೆ ಮಾಡಲಾಗಿದೆ ಎಂದು ಮಂಡಳಿ ಸದಸ್ಯರಾದ ಶ್ರೀಮತಿ ನಳಿನಿ ರಾಜಶೇಖರ ಪಾಟೀಲ ತಿಳಿಸಿದರು.
ಬೆಳಿಗ್ಗೆ 8 ಗಂಟೆಯಿಂದ ಅಷ್ಟವಿನಾಯಕನಿಗೆ ಪೂಜೆ, ಅಭಿಷೇಕ ಮತ್ತು ಬಿಲ್ವಾರ್ಚನೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಉತ್ಸವ ಜರುಗಿತು. ನಂತರ 11 ಗಂಟೆಗೆ ಹೋಮ ಹವನ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಹಾಮಂಗಳಾರತಿ ಬಳಿಕ ಮಹಾಪ್ರಸಾದ ಜರುಗಿತು. ಮಹಿಳಾ ಮಂಡಳಿಯ ಸದಸ್ಯರೆಲ್ಲರೂ ಒಂದೇ ತರಹದ ಸೀರೆಗಳನ್ನುಟ್ಟು ಅಷ್ಟವಿನಾಯಕನಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ನಳಿನಿ ರಾಜಶೇಖರ ಪಾಟೀಲ ತಿಳಿಸಿದರು.
ಮಂಡಳಿಯ ಇನ್ನೋರ್ವ ಸದಸ್ಯೆ ಪ್ರಭಾವತಿ ಕ್ಯಾಸಾ ಅವರು ಮಾತನಾಡಿ ರಾಜಕೀಯ, ಧಾರ್ಮಿಕಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಕ್ರಮಗಳಿರಲಿ. ಮೊದಲು ಗಣೇಶ ಮೈದಾನಕ್ಕೆ ಮುಖಂಡರು ಬರುತ್ತಾರೆ. ಹೀಗಾಗಿ ಬೇಡಿದ್ದ ವರವನ್ನು ಕರುಣಿಸುವ ಶಕ್ತಿ ಅಷ್ಟವಿನಾಯಕನಲ್ಲಿದೆ. ಬ್ರಹ್ಮೋತ್ಸವ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ 6ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅಷ್ಟವಿನಾಯಕ ಮೂರ್ತಿಯನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗಿದೆ. ಭಕ್ತರು ನಿರಂತರವಾಗಿ ದರ್ಶನ ಪಡೆಯುತ್ತಿದ್ದಾರೆ. ಗಣೇಶ ಮೈದಾನದಲ್ಲಿರುವ ಅಷ್ಟವಿನಾಯಕನ ಮೂರ್ತಿ ಇದೀಗ ಆಕರ್ಷಕವಾಗಿ ಕಂಡುಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ಸುಮಾರು ಒಂದು ತಿಂಗಳುಗಳ ಕಾಲ ಮಂದಿರದಲ್ಲಿ ಶ್ರೀ ಪ್ರಕಾಶ ಕುಲಕರ್ಣಿ ಮುಗನೂರ ಅವರಿಂದ ಸಂಗೀತ ಭಜನೆ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಷ್ಟವಿನಾಯಕ ಮಹಿಳಾ ಮಂಡಳದ ಎಲ್ಲಾ ಸದಸ್ಯರು, ಸುತ್ತಮುತ್ತಲಿನ ಓಣಿಯ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.