ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಜಾಗೃತಿ ಅಗತ್ಯ

ಕೋಲಾರ,ಆ,೩೦- ತಾಲ್ಲೂಕಿನಾದ್ಯಂತ ಕಳೆದ ಎರಡು ವಾರಗಳಿಂದ ಉತ್ತಮ ಮಳೆಯಾಗಿದ್ದು ಬಹುತೇಕ ಕೆರೆ, ಕುಂಟೆಗಳು ತುಂಬಿಕೋಡಿ ಹರಿಯುವ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಗ್ರಾಮೀಣ ಭಾಗದಲ್ಲಿ ಜನರು ಮುಂದಾಗುವ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇದೆ. ದಯಮಾಡಿ ನಿಗದಿ ಪಡಿಸಿದ ಸ್ಥಳದಲ್ಲಿ ಅಥವಾ ಕೃತಕ ಹೊಂಡಗಳನ್ನು ನಿರ್ಮಿಸಿಕೊಂಡು ಗಣೇಶ ವಿಸರ್ಜನೆ ಮಾಡಬೇಕೆಂದು ಕೋಲಾರ ತಾಲ್ಲೂಕು ತಹಶೀಲ್ದಾರ್ ವಿ.ನಾಗರಾಜ್ ತಿಳಿಸಿದರು.
ಇಂದು ತಮ್ಮ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕೋಲಾರ ತಾಲ್ಲೂಕು ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದು, ಈ ಪರಂಪರೆ ಮುಂದುವರೆಯಬೇಕು. ಗೌರಿ, ಗಣೇಶ ಹಬ್ಬದ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು. ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇಡುವವರು ನಗರಸಭೆ, ಗ್ರಾಮ ಪಂಚಾಯತಿ, ಬೆಸ್ಕಾಂ, ಲೋಕೋಪಯೋಗಿ, ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು. ಡಿಜೆ ಸೌಂಡ್ ಸಿಸ್ಟಂ ಯಾರು ಬಳಸುವಂತಿಲ್ಲ. ಯಾರೊಬ್ಬರೂ ಗಲಾಟೆ ಗಲಭೆ ಮಾಡಿಕೊಳ್ಳದೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಇಟ್ಟು ಅದ್ದೂರಿಯಾಗಿ ಗೌರಿ, ಗಣೇಶ ಹಬ್ಬವನ್ನು ಆಚರಣೆ ಮಾಡುವಂತೆ ಮನವಿ ಮಾಡಿದರು.