ಗಣೇಶ ಉತ್ಸವ ಈದ್-ಮಿಲಾದ್ ಪ್ರಯುಕ್ತ ಶಾಂತಿ ಸಭೆ

ಅಫಜಲಪುರ:ಸೆ.16: ಭಾವೈಕ್ಯತೆಯ ಸಂಕೇತವಾಗಿರುವ ಗಣೇಶ ಚತುರ್ಥಿ ಹಾಗೂ ಈದ್-ಮಿಲಾದ್ ಉತ್ಸವಗಳನ್ನು ಸರಳವಾಗಿ ಆಚರಿಸುವ ಮೂಲಕ ಶಾಂತಿ ತುಂಬಿರುವ ಸಮಾಜದಲ್ಲಿ ಅಶಾಂತಿ ಸೃಷ್ಟಿಸಬಾರದು ಎಂದು ಸಿ.ಪಿ.ಐ ಪಂಡಿತ ಸಗರ್ ತಿಳಿಸಿದರು.

ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಗಣೇಶ ಉತ್ಸವ ಹಾಗೂ ಈದ್-ಮಿಲಾದ್ ಆಚರಣೆ ಕುರಿತು ಏರ್ಪಡಿಸಿದ್ದ ಶಾಂತಿಸಭೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಗಣೇಶ ಪ್ರತಿಷ್ಠಾಪನೆ ಮಾಡುವ ಆಯೋಜಕರು ಪೆÇಲೀಸ್ ಠಾಣೆ, ಪುರಸಭೆ, ಜೆಸ್ಕಾಂ, ಅಗ್ನಿಶಾಮಕ ಹಾಗೂ ತಹಸೀಲ್ ಕಚೇರಿಯಿಂದ ಅಧೀಕೃತ ಪರವಾನಿಗೆ ಪಡೆದು ನಿಯಮಾನುಸಾರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ಹಾಡುಗಳಾಗಲಿ ಅಥವಾ ಪ್ರಚೋದನಕಾರಿ ಹೇಳಿಕೆಗಳನ್ನಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಬಾರದು. ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜಕ್ಕೆ ಐಕ್ಯತೆಯ ಸಂದೇಶ ಸಾರೋಣ ಎಂದು ಸಲಹೆ ನೀಡಿದರು.

ಪಿ.ಎಸ್.ಐ ಮಡಿವಾಳಪ್ಪ ಬಾಗೋಡಿ ಮಾತನಾಡಿ ಹಬ್ಬ ಉತ್ಸವಗಳನ್ನು ಭಾವೈಕ್ಯತೆಯಿಂದ ಆಚರಿಸಲು ಎಲ್ಲರೂ ಸಹಕರಿಸಬೇಕು ಹಾಗೂ ಕಾನೂನುಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ತೀವ್ರ ನಿಗಾ ವಹಿಸಿ ಕಠಿಣ ಕ್ರಮ ಜರುಗಿಸುವುದಾಗಿ ಸೂಚನೆ ನೀಡಿದರು.

ಸಭೆಯನ್ನುದ್ದೇಶಿಸಿ ಗ್ರೇಡ್-2 ತಹಸೀಲ್ದಾರ್ ಶರಣಬಸಪ್ಪ ಹೊಸಮನಿ, ಪುರಸಭೆಯ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ, ಮುಖಂಡರಾದ ಮಕ್ಬೂಲ್ ಪಟೇಲ್, ಮಳೇಂದ್ರ ಡಾಂಗೆ, ಮತೀನ್ ಪಟೇಲ್, ರಾಜು ಆರೇಕರ, ಧಾನು ಪತಾಟೆ, ಆನಂದ ಶೆಟ್ಟಿ ಮಾತನಾಡಿದರು.

ಸಭೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವಿಶ್ವನಾಥ ಕಾಮರೆಡ್ಡಿ, ಜೆಸ್ಕಾಂ ಸಿಬ್ಬಂದಿ ಮಾಜೀದ್ ಸೋಲಾಪುರ, ಮುಖಂಡರಾದ ಚಂದು ದೇಸಾಯಿ, ಶಂಕರ ಮ್ಯಾಕೇರಿ, ರಾಜು ಬಡದಾಳ ಸೇರಿದಂತೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಅನೇಕ ಮುಖಂಡರು ಉಪಸ್ಥಿತರಿದ್ದರು.