ಗಣೇಶಪೂರ ವಾಡಿಯಲ್ಲಿ 35 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಖಂಡ್ರೆ ಚಾಲನೆ

ಭಾಲ್ಕಿ:ನ.14:ಕ್ಷೇತ್ರದಲ್ಲಿ ರೋಡ್ ಕ್ರಾಂತಿ ನಡೆದಿದೆ. ಕಳೆದ ಹತ್ತಾರೂ ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ತಾಲೂಕಿನ ಗಣೇಶಪೂರ್ ವಾಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ಅಂದಾಜು 35 ಲಕ್ಷ ರೂ ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ಮತ್ತು ಜಲಜೀವನ ಮಿಷನ್ ಯೋಜನೆಯಡಿ 60 ಲಕ್ಷ ರೂ ವೆಚ್ಚದ ಮನೆ ಮನೆಗೂ ಕುಡಿವ ನೀರು ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.ನಾನು ಶಾಸಕನಾಗುವುದಕ್ಕಿಂತ ಮೊದಲು ತಗ್ಗುಗಳಲ್ಲಿ ರಸ್ತೆ ಹುಡುಕುವ ಪರಸ್ಥಿತಿಯಿತ್ತು. ಆದರೆ, ಇದೀಗ ಎಲ್ಲವೂ ಬದಲಾವಣೆ ಆಗಿದೆ.
ತಾಲೂಕಿನ ಎಲ್ಲ ಬಡಾವಣೆ, ತಾಂಡಾ, ವಾಡಿ ಸೇರಿ ಹಳ್ಳಿ ಹಳ್ಳಿಗಳು ಕೂಡ ರಸ್ತೆ ಸಂಪರ್ಕ ಕಂಡಿವೆ ಎಂದರು.
ನಾನು ಮಂತ್ರಿಯಿದ್ದ ಸಂದರ್ಭದಲ್ಲಿ ನೀರಾವರಿ ಯೋಜನೆ, ಕಟ್ಟಡ, ರಸ್ತೆಗಳ ನಿರ್ಮಾಣ ಸೇರಿ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದ್ದೆ, ದಾಖಲೆ ರೀತಿಯಲ್ಲಿ ಬಡ ಜನರಿಗೆ ವಿವಿಧ ವಸತಿ ಯೋಜನೆಯಡಿ ಮನೆ ಹಂಚಿಕೆ ಮಾಡಿದ್ದೇನೆ.
ಆದರೆ, ವಿರೋಧಿಗಳು ಬಡವರ ಪ್ರಗತಿ, ಅಭಿವೃದ್ಧಿ ಸಹಿಸದೇ ಇಲ್ಲಸಲ್ಲದ ದೂರು ನೀಡಿ ಮನೆ ಹಣ ಬಿಡುಗಡೆಗೆ ಬ್ರೇಕ್ ಹಾಕಿ ಬಡ ಜನರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ದೂರಿದರು.
ಇವರಿಗೆ ಬಡವರ ಶಾಪ ತಟ್ಟಲಿದೆ ಮುಂದೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಆ ಸಂದರ್ಭದಲ್ಲಿ ಸೂರು ಇಲ್ಲದವರಿಗೆ ಸೂರು ಒದಗಿಸಿ ತಾಲೂಕು ಗುಡಿಸಲು ಮುಕ್ತ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಂಮತರಾವ ಚವ್ಹಾಣ, ಅಶೋಕ ಕಣಜಿ, ಮಹಾದೇವ ದೇವಪ್ಪ, ಅನಿಲ ಲೋಖಂಡೆ, ಮಹಾದೇವ ಸ್ವಾಮಿ, ರಾಜಕುಮಾರ ಬಿರಾದಾರ್, ಶ್ರೀನಿವಾಸ್, ಗಣಪತಿ, ಇಸ್ಮಾಯಿಲ್, ಅನಿಲ ಮಾನಕಾರಿ, ಯಾದವ, ವಿನೋದ, ಅಮರ ಸೇರಿದಂತೆ ಹಲವರು ಇದ್ದರು.

ಗಣೇಶಪೂರ್ ವಾಡಿ ಜನರ ಬೇಡಿಕೆಯಂತೆ 35 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಿಗದಿ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. 60 ಲಕ್ಷ ರೂ ವೆಚ್ಚದಲ್ಲಿ ಎಲ್ಲ ಮನೆ ಮನೆಗೂ ಕುಡಿವ ನೀರಿನ ಯೋಜನೆ ಕಲ್ಪಿಸಲಾಗಿದೆ. ಇದರಿಂದ ಮುಂದಿನ 20-25 ವರ್ಷ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ನೀಗಲಿದೆ.

  • ಈಶ್ವರ ಖಂಡ್ರೆ ಶಾಸಕರು, ಭಾಲ್ಕಿ