ಗಣಿ ನಾಡಲ್ಲಿ ಕಾಂಗ್ರೆಸ್ ಬಲಪ್ರದರ್ಶನ ಕಾಂಗ್ರೆಸ್ ವಿರುದ್ಧ ನಾಯಕರ ವಾಗ್ದಾಳಿ

ಬಳ್ಳಾರಿ,ನ.೨೦- ಗಣಿನಾಡಿನಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಿದೆ. ಮುಂಬರುವ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ನೀಡಿದ ಲಾಭವನ್ನು ಪಡೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್‌ಜೋಷಿ, ನಾರಾಯಣಸ್ವಾಮಿ ಹಾಗೂ ಇತರ ಬಿಜೆಪಿ ರಾಷ್ಟ್ರೀಯ ಮುಖಂಡು ಪಾಲ್ಗೊಂಡು ಮುಂಬರುವ ಚುನಾವಣೆಗೆ ರಣ ಕಹಳೆ ಮೊಳಗಿಸಿದರು.ಎಲ್ಲೆಡೆ ಬಿಜೆಪಿ ನಾಯಕರ ಕಟೌಟ್‌ಗಳು, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಜನಸಂಕಲ್ಪ ಯಾತ್ರೆ ನಡೆಸಿರುವ ಬಿಜೆಪಿ, ಇದೀಗ ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಕಾಂಗ್ರೆಸ್ ಪಕ್ಷಕ್ಕೆ ಕುಂಕುಮ, ಕೇಸರಿ ಕಂಡರೆ ಆಗುವುದಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.ಮೀಸಲಾತಿಗಾಗಿ ವಾಲ್ಮೀಕಿ ಸ್ವಾಮೀಜಿ ಹೋರಾಟ ನಡೆಸಿದರು. ಪಕ್ಷದ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ಎಸ್‌ಸಿ/ಎಸ್‌ಟಿಗೆ ಮೀಸಲಾತಿ ಹೆಚ್ಚಳವಾಗಿದೆ. ಇದಕ್ಕೆ ಕಾಂಗ್ರೆಸ್ ಹೊಟ್ಟೆಕಿಚ್ಚು ಪಡುತ್ತಿದೆ ಎಂದು ಕಿಡಿಕಾರಿದರು.
ಹಿಂದೂ ಎಂದರೆ ಕೆಟ್ಟ ಶಬ್ಧ ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದೂ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿದ್ದು ವಿಜಯನಗರ ಅರಸರು. ಮದಕರಿ ನಾಯಕನನ್ನು ಮೋಸದಿಂದ ಕೊಂದ ಟಿಪ್ಪುವಿನ ಜಯಂತಿಯನ್ನು ಕಾಂಗ್ರೆಸ್ ಆಚರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ ಮಾತನಾಡಿ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ತೆಗೆದು ಹಾಕುತ್ತಾರೆ ಎಂಬ ವದಂತಿ ಎಬ್ಬಿಸಿತ್ತು. ಆದರೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಬಿಜೆಪಿ ಬದ್ಧತೆ ಪ್ರದರ್ಶಿಸುತ್ತಿದೆ.ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ದುರ್ಬಲ ಜನರ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತದೆ ಎಂದು ಹೇಳಿದರು.ಕಾಂಗ್ರೆಸ್ ಸದಾ ಸುಳ್ಳು ಹೇಳುತ್ತದೆ ಎಂದು ವಾಗ್ದಾಳಿ ನಡೆಸಿದ ಅವರು, ಬಳ್ಳಾರಿಯಿಂದ ಗೆದ್ದು ಹೋದ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಯಾವುದೇ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಅಮೇಥಿಯಲ್ಲೂ ಯಾವುದೇ ಅಭಿವೃದ್ಧಿ ಕೆಲಸ ಕೈಗೊಂಡಿಲ್ಲ. ಈ ಕ್ಷೇತ್ರದಲ್ಲೂ ಸೋನಿಯಾರಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
೧೦ ಬಾರಿ ರಾಜ್ಯದ ಬಜೆಟ್ ಮಂಡಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕ್ಷೇತ್ರಗಳನ್ನು ಅಭಿವೃದ್ಧಿ ಮಾಡದೆ ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಹುಡುಕಾಟದಲ್ಲಿ ನಿರತರಾಗಿದ್ದಾರೆ ಎಂದು ಲೇವಡಿ ಮಾಡಿದರು. ಂಬರುವ ಚುನಾವಣೆಯಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತವಾಗಬೇಕು ಎಂದು ಕರೆ ನೀಡಿದರು.