ಗಣಿ ಕಾರ್ಮಿಕರಿಗೆ ಹಕ್ಕುಪತ್ರ ವಿತರಣೆಯಲ್ಲಿ ಶಾಸಕರ ಪಾತ್ರವಿಲ್ಲ

ಕೋಲಾರ,ಜು.೩೦- ಚಿನ್ನದ ಗಣಿ ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರಗಳ ವಿತರಣೆಯಲ್ಲಿ ಸ್ಥಳೀಯ ಶಾಸಕರ ಪಾತ್ರ ಏನೂ ಇಲ್ಲ, ಕಾಂಗ್ರೆಸ್ ಸರ್ಕಾರ ಇದೆ ಎಂದು ಅಧಿಕಾರ ದುರುಪಯೋಗಪಡಿಸಿಕೊಂಡು ಜನರ ಮುಂದೆ ಡ್ರಾಮಾ ಮಾಡಲು ಅಧಿಕಾರಿಗಳೊಂದಿಗೆ ಚಿನ್ನದ ಗಣಿಗಳ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಶಾಸಕಿ ರೂಪಕಲಾಶಶಿಧರ್ ವಿರುದ್ಧ ಕೆಂಡಾಮಂಡಲವಾದರು.


ಕೆ.ಜಿ.ಎಫ್ ನಗರದ ಸ್ವರ್ಣ ಭವನದಲ್ಲಿ ಸರ್ವೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಶಾಸಕರು ಸಭೆ ನಡೆಸುತ್ತಿದ್ದಾರೆಂಬ ವಿಷಯ ತಿಳಿದು ಮೊಬೈಲ್ ಮೂಲಕ ಮಾದ್ಯಮದವರೊಂದಿಗೆ ಅವರು ಮಾತನಾಡಿದರು.
ಶಾಸಕರ ತಂದೆ ಸಂಸದರಾಗಿದ್ದಂತಹ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದು, ಚಿನ್ನದ ಗಣಿ ಲೂಟಿ ಮಾಡಿ ೨೦೦೧ ಚಿನ್ನದ ಗಣಿಗಳನ್ನು ಮುಚ್ಚುವಂತೆ ಮಾಡಿದರು. ಕಾಂಗ್ರೆಸ್ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಸಹ ಗಣಿ ಕಾರ್ಮಿಕರ ಹಿತ ಕಾಯಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿ, ಈಗ ಶಾಸಕರೊಂದಿಗೆ ಇರುವ ಏಜೆಂಟರು ಮತ್ತು ನಾಯಕರು ಚಿನ್ನದ ಗಣಿಗಳ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಚಿನ್ನದ ಗಣಿ ಜಾಗದಲ್ಲಿ ಬಡಾವಣೆಗಳನ್ನು ಮಾಡುತ್ತಿದ್ದು, ಇದನ್ನು ಸಕ್ರಮಗೊಳಿಸಲು ಶಾಸಕರು ಚಿನ್ನದ ಗಣಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷರೊಂದಿಗೆ ಸಭೆ ನಡೆಸಿರುವುದು ಖಂಡನೀಯ ಎಂದರು.
ಬಿಜಿಎಂಎಲ್ ಸಂಸ್ಥೆಯು ಎಸ್‌ಟಿಬಿಪಿ ನೌಕರರಿಗೆ ನೀಡಿರುವ ಜಾಗ ಅವರ ಹೆಸರಿಗೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನೊಂದಣಿ ಮಾಡಿಕೊಡುವಂತೆ ಹೈಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಾಗಿ ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.
ಮಾದ್ಯಮದವರೊಂದಿಗೆ ಅವರು ಮಾತನಾಡಿ ಗಣಿ ಕಾರ್ಮಿಕರಿಗೆ ಕೋರ್ಟ್ ನಿರ್ದೇಶನದಂತೆ ಮನೆಗಳನ್ನು ಮಂಜೂರು ಮಾಡುವುದಾದರೆ ೨೦೦ ಎಕರೆ ಜಾಗ ಒಂದೇ ಜಾಗದಲ್ಲಿ ನೀಡಿ, ರಾಜ್ಯ ಸರ್ಕಾರ, ನಗರಸಭೆಯಿಂದ ನಾವು ಮೂಲಭೂತ ಸೌಲಭ್ಯಗಳನ್ನು ನಾವು ನೀಡುತ್ತೇವೆ, ಗಣಿಯಲ್ಲಿ ದಶಕಗಳಿಂದ ದುಡಿದಿರುವುದರಿಂದ ಅವರ ಗೌರವಕ್ಕಾಗಿ ಒಂದೆಡೆ ಜಾಗವನ್ನು ನೀಡುವಂತೆ ಒತ್ತಾಯಿಸಿದರು.