ಗಣಿನಾಡಿನಲ್ಲಿ 449 ಗ್ರಾಮಗಳು ಕೋವಿಡ್ ಮುಕ್ತ

ಎನ್.ವೀರಭದ್ರಗೌಡ
ಬಳ್ಳಾರಿ, ಜೂ.10: ಅವಿಭಜಿತ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ವ್ಯಾಪಕವಾಗಿ ಹಬ್ಬಿದ್ದ ಕೋವಿಡ್ ಸೋಂಕು ತನ್ನ ಕಬಂಧ ಬಾಹುಗಳನ್ನು ಸಡಿಲು ಮಾಡಿದ್ದು. ನಿನ್ನೆ ವರೆಗೆ ಜಿಲ್ಲೆಯ 1043 ಗ್ರಾಮಗಳ ಪೈಕಿ 449 ಗ್ರಾಮಗಳು ಕೋವಿಡ್ ಸೋಂಕಿನಿಂದ ಮುಕ್ತವಾಗಿವೆ.
ಕಳೆದ ತಿಂಗಳು ಈ ಮಹಮ್ಮಾರಿ ಕೋವಿಡ್ ಸೋಂಕಿನ 2ನೇ ಅಲೆ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಶರವೇಗದಲ್ಲಿ ಹಬ್ಬಿ 500 ಕ್ಕೂ ಹೆಚ್ಚು ಜನರ ಜೀವ ಪಡೆದುಕೊಂಡಿತು. ಚಿಕಿತ್ಸೆಗೆ ಬೆಡ್‍ಗಳು, ಆಕ್ಸಿಜನ್ ಸಿಗದೇ ರೋಗಿಗಳು ಪರದಾಡಿದರು, ಹೋಮ್ ಐಸೋಲೇಷನ್ ನಿಂದ ಮನೆಯಲ್ಲೇ ಸೋಂಕು ಹೆಚ್ಚಿಸಿಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.
ಇದರಿಂದ ದಿನಾಳು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2 ಸಾವಿಕ್ಕೆ ಮೀರತೊಡಗಿತು. ಹಾಗ ಸಭೆ ನಡೆಸಿದ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಗ್ರಾಮಗಳಲ್ಲಿ ಹೋಮ್ ಐಸೊಲೇಷನ್ ಮಾಡುತ್ತಿರುವುದೇ ಈ ಸೋಂಕು ಮತ್ತಷ್ಟು ಹರಡಲು ಕಾರಣವಾಗಿದೆ. ಹಳ್ಳಿಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ತರೆಯಲು ಸೂಚಿಸಿ. ಅದನ್ನು ಕಾರ್ಯರೂಪಕ್ಕೆ ತಂದಿದ್ದರಿಂದ ಇಂದು ಜಿಲ್ಲೆಯಲ್ಲಿ ಐಸಿಯು ಬೆಡ್‍ಗಳನ್ನು ಸಹ ಖಾಲಿ ಉಳಿಯುವಂತೆ ಸೋಂಕು ದಿನೇ ದಿನೇ ತನ್ನ ಪ್ರಭಾವವನ್ನು ಕಡಿಮೆ ಮಾಡಿಕೊಂಡಿದೆ.
ಕೋವಿಡ್ ಸೋಂಕು ಮೊದಲನೇ ಅವಧಿಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿತು. ಮೊದಲ ಅವಧಿಯಲ್ಲಿ ನಗರ ಪ್ರದೇಶಗಳನ್ನು ಹೆಚ್ಚು ಆವರಿಸಿದ್ದ ಸೋಂಕು ಎರಡನೇ ಅವಧಿಯಲ್ಲಿ ಗ್ರಾಮೀಣ ಭಾಗಕ್ಕೂ ಹೆಚ್ಚಾಗಿ ವ್ಯಾಪಿಸಿತು. ಜನರು ತತ್ತರಿಸುವಂತೆ ಮಾಡಿತು. ಸೋಂಕಿನಿಂದ ಸಂಭವಿಸಿದದ ಸಾವಿಗೆ ಬೆಚ್ಚಿಬಿದ್ದ ಹಲವು ಗ್ರಾಮಗಳ ಜನರು, ಮುಖಂಡರು ಗ್ರಾಮಕ್ಕೆ ಸ್ವಯಂ ಲಾಕ್‍ಡೌನ್ ವಿಧಿಸಿಕೊಂಡರು. ಜೊತೆಗೆ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೋವಿಡ್ ಕೇರ್ ಸೆಂಟರ್, ಸ್ಯಾನಿಟೈಸ್, ಲಾಕ್‍ಡೌನ್ ಮೊದಲಾದ ಕ್ರಮಗಳಿಂದ ್ಲ ನಿಧಾನವಾಗಿ ಸೋಂಕು ಕಡಿಮೆಯಾಗುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿದೆ.
ಆರೋಗ್ಯ ಸಂರಕ್ಷಣಾ ತಂಡ:
ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡಿದ್ದ ಸೋಂಕನ್ನು ನಿಯಂತ್ರಿಸಲು ಕುಟುಂಬ ಆರೋಗ್ಯ ಸಂರಕ್ಷಣಾ ತಂಡ ಪ್ರಮುಖ ಪಾತ್ರ ವಹಿಸಿದೆ. ಆಯಾ ಗ್ರಾಮದ ಕರವಸೂಲಿಗಾರರು, ನೀರುಗಂಟಿಗಳು, ಆಶಾ-ಅಂಗನಾಡಿ ಕಾರ್ಯಕರ್ತೆಯರು, ನರೇಗಾ ಕಾಯಕಬಂಧುಗಳು, ಬಿಎಫ್‍ಟಿಗಳು, ಸ್ವಸಹಾಯ ಗುಂಪಿನ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಸಹಾಯಕರು, ಪದವೀಧರರು, ಆಸಕ್ತಿಯುಳ್ಳ ಯುವಕರು ಈ ಕುಟುಂಬ ಆರೋಗ್ಯ ಸಂರಕ್ಷಣಾ ತಂಡದ ಸದಸ್ಯರನ್ನು ಪ್ರತಿ 50 ಕುಟುಂಬಕ್ಕೆ ಒಬ್ಬರನ್ನು ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.
ಇವರು ತಮ್ಮ ವ್ಯಾಪ್ತಿಯ ಪ್ರತಿ ಕುಟುಂಬದ ಮೇಲೆ ಪ್ರತಿದಿನ ನಿಗಾ ವಹಿಸಿ, ಆ ಕುಟುಂಬದ ಸದಸ್ಯರಲ್ಲಿ ಜ್ವರ, ಕೆಮ್ಮು, ನೆಗಡಿಗಳಂತಹ ಲಕ್ಷಣಗಳು ಕಂಡುಬಂದಲ್ಲಿ ಆರಂಭದಲ್ಲೇ ಪತ್ತೆಹಚ್ಚಿ ಮೂರು ದಿನಗಳಿಗೆ ಔಷಧಗಳ ಕಿಟ್‍ಗಳನ್ನು ವಿತರಿಸಿದರು. ಔಷಧಗಳನ್ನು ಸೇರಿಸಿದ ಬಳಿಕವೂ ಜ್ವರ, ನೆಗಡಿ, ಕೆಮ್ಮು ರೋಗಲಕ್ಷಣಗಳು ಕಂಡುಬಂದಲ್ಲಿ ಅಂತಹವರನ್ನು ಸ್ಥಳೀಯವಾಗಿಯೇ ಕೋವಿಡ್ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಪಾಸಿಟಿವ್ ಬಂದಲ್ಲಿ ಸೋಂಕಿತರಲ್ಲಿ ಸೋಂಕನ್ನು ಆಧರಿಸಿ ಅವರಿಗೆ ಕೋವಿಡ್ ಕೇರ್ ಸೆಂಟರ್, ಸಮುದಾಯ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಕೊಡಿಸಿದರು. ಆರ್ಥಿಕವಾಗಿ ದುರ್ಬಲ ಕುಟುಂಬದ ಸೋಂಕಿತರಿಗೆ ಊಟ, ಉಪಾಹಾರದ ವ್ಯವಸ್ಥೆಯೂ ಗ್ರಾಪಂ ವತಿಯಿಂದ ಮಾಡಲಾಗುತ್ತಿದೆ. ಇದು ಗ್ರಾಮಗಳಲ್ಲಿ ನಿಧಾನವಾಗಿ ಸೋಂಕು ನಿಯಂತ್ರಣಕ್ಕೆ ಬರಲು ಪ್ರಮುಖ ಕಾರಣವಾಗಿದೆ.
ಸಧ್ಯ ಜಿಲ್ಲೆಯ 1043 ಗ್ರಾಮಗಳಲ್ಲಿ ಈವರೆಗೆ 15421 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 12734 ಜನರು ಗುಣಮುಖರಾಗಿದ್ದಾರೆ. ಇನ್ನೂ ಈ ಪೈಕಿ 66 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು, 111 ಗ್ರಾಮಗಳಲ್ಲಿ 5ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು, 417 ಗ್ರಾಮಗಳಲ್ಲಿ 5ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ಇವೆ.
ಕೋವಿಡ್ ಮುಕ್ತ:
ಬಳ್ಳಾರಿ ತಾಲೂಕು 13, ಹಡಗಲಿ 69, ಹ.ಬೊ.ಹಳ್ಳಿ 27, ಹರಪನಹಳ್ಳಿ 93, ಹೊಸಪೇಟೆ 19, ಕಂಪ್ಲಿ 12, ಕೊಟ್ಟೂರು 24, ಕೂಡ್ಲಿಗಿ 84, ಸಂಡೂರು 74, ಸಿರುಗುಪ್ಪ 32 ಸೇರಿ ಒಟ್ಟು 449 ಗ್ರಾಮಗಳಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ.