ಗಣಿನಾಡಿನಲ್ಲಿ ಹೆಚ್ಚಿದ ಕೋವಿಡ್ ಕೇರ್ ಸೆಂಟರ್ ನೀಗಿದ ಬೆಡ್ ಕೊರತೆ. ಸೋಂಕು ಇಳಿಮುಖ

 • ಜಿಲ್ಲೆಯಲ್ಲಿ 35 ಕ್ಕೂ ಹೆಚ್ಚು ಕೋವಿಡ್ ಕೇರ್ ಸೆಂಟರ್
 • ಇನ್ನೂ ಖಾಲಿ ಇರುವ ಬೆಡ್‍ಗಳು
 • ಲಾಕ್‍ಡೌನ್ ಹಿನ್ನಲೆ ಇಳಿಮುಖದತ್ತ ಸೋಂಕು
 • ಡಿ ಗ್ರೂಪ್, ವೈದ್ಯ ಸಿಬ್ಬಂದಿ ಕೊರತೆ
 • ಸ್ಯಾನಿಟೈಜರ್, ಗ್ಲೌಸ್, ಆಕ್ಸಿ ಮೀಟರ್ ಅವಶ್ಯಕತೆ
  ಎನ್.ವೀರಭದ್ರಗೌಡ
  ಬಳ್ಳಾರಿ, ಮೇ.27: ರಾಜ್ಯದಲ್ಲಿಯೇ ಅತಿಹೆಚ್ಚು ಕೋವಿಡ್ ಸೋಂಕು ಕಂಡು ಬರುವ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಈಗ ಲಾಕ್‍ಡೌನ್ ಮೊದಲಾದ ಮುಂಜಾಗ್ರತ ಕ್ರಮದ ಜೊತೆಗೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಲು ಕಾರಣವಾಗಿದ್ದ ಹೋಮ್ ಐಸೊಲೇಷನ್ ರದ್ದು ಮಾಡಿ. ಅವರಿಗೆಲ್ಲ ಕೋವಿಡ್ ಕೇರ್ ಸೆಂಟರ್‍ನಲ್ಲಿ ಇರಿಸಿರುವುದರಿಂದ ಕಳೆದ ನಾಲ್ಕು ದಿನಗಳಿಂದ ಕೋವಿಡ್ ಸೋಂಕು ಇಳಿಮುಖವಾಗಿದೆ.
  ದಿನ ಒಂದಕ್ಕೆ ಎರೆಡು ಸಾವಿರಕ್ಕಿಂತಲೂ ಹೆಚ್ಚು ಅಂದರೆ ಪರೀಕ್ಷೆ ಮಾಡಿದ ಜನರಲ್ಲಿ ಶೇ 63 ವರೆಗೆ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಆ ಪ್ರಮಾಣ ಶೇ 20 ರಿಂದ 25 ಕ್ಕೆ ಇಳಿದಿದೆ. ಗ್ರಾಮೀಣ ಪ್ರದೇಶದ ಜನರು ಪಾಸಿಟಿವ್ ಬಂದರೂ ಕೋವಿಡ್ ಕೇರ್ ಸೆಂಟರ್‍ಗಳಿಲ್ಲದೆ ಮನೆಯಲ್ಲೇ ಇದ್ದು ಐಸೊಲೇಷನ್ ಪಡೆಯುತ್ತಿದ್ದರು. ಅವರು ಕೋವಿಡ್ ನಿಯಂತ್ರಣದ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸದೇ ಇದ್ದುದರಿಂದ ಸೋಂಕು ಹೆಚ್ಚಲು ಕಾರಣವಾಯ್ತು.
  ಇದಕ್ಕಾಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ವಾರದಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಘೊಷಣೆ ಮಾಡುವ ಕ್ರಮದ ಜೊತೆಗೆ. ಗ್ರಾಮೀಣ ಪ್ರದೇಶದ ಸರ್ಕಾರಿ ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್‍ಗಳನ್ನಾಗಿ ಪರಿವರ್ತಿಸಿ. ಹಳ್ಳಿಗಳ ಜನರಿಗೆ ಹೋಮ್ ಐಸೊಲೇಷನ್ ನೀಡದೇ ಸೋಂಕು ಬಂದವರನ್ನೆಲ್ಲ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಇರಿಸಲು ಮುಂದಾಗಿದೆ.
  ಹಾಗಾಗಿ ಜಿಲ್ಲೆಯಲ್ಲಿ ಈಗ 35 ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭ ಮಾಡಿ 2782 ಬೆಡ್‍ಗಳ ವ್ಯವಸ್ಥೆ ಮಾಡಿದೆ. ಅಲ್ಲದೆ ಖಾಸಗಿ ಸಂಸ್ಥೆಗಳು ಸಹ 300 ಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಿವೆ.
  ಇದರಿಂದ ಈಗ ಜಿಲ್ಲೆಯಲ್ಲಿ ಸೋಂಕು ಇದ್ದವರಿಗೆ ಬೆಡ್‍ಗಳ ಕೊರತೆ ಇಲ್ಲದಂತಾಗಿದೆ. ಜೊತೆಗೆ ಜಿಂದಾಲ್ ಸಂಸ್ಥೆಯಿಂದ 270 ಹಾಸಿಗೆಗಳ ಆಕ್ಸಿಜ್‍ನ್ ಸಹಿತ ಬೆಡ್‍ಗಳ ಆಸ್ಪತ್ರೆ ಇರುವುದರಿಂದ ಆಕ್ಸಿಜನ್ ಬೆಡ್ ಕೊರತೆ ಇಲ್ಲದಾಗಿದೆ.
  ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ವಸತಿ ಶಾಲೆ ಮತ್ತು ಕುರುಗೋಡು ತಾಲೂಕಿನ ಎರ್ರಂಗಳಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದು ಇಲ್ಲಿ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.
  ಪ್ರತಿದಿನ ಇಲ್ಲಿ ಎಲ್ಲರಿಗೂ ಚಿಕಿತ್ಸೆ ಜೊತೆಗೆ ಉಚಿತವಾಗಿ ಊಟ, ಹಣ್ಣು ಮೊದಲಾದವುಗಳನ್ನು ನೀಡಲಾಗುತ್ತಿದೆ. ಕೊಳಗಲ್ಲು ಕೋವಿಡ್ ಹಾರೈಕೆ ಕೇಂದ್ರದಲ್ಲಿ ಇರುವ ರಾಮು, ಲಕ್ಷ್ಮೀ, ಬಸವರಾಜ್ ಅವರು ಇಲ್ಲಿ ಉತ್ತಮ ಸೌಲಭ್ಯ ಇದೆ, ಉತ್ತಮ ಆಹಾರ ಚಿಕಿತ್ಸೆ ದೊರೆಯುತ್ತಿದೆ. ಸಧ್ಯದಲ್ಲೇ ಗುಣಮುಖರಾಗಿ ಮನೆಗೆ ಹೋಗುವುದಾಗಿ ಹೇಳುತ್ತಿದ್ದಾರೆ


ಈ ಮೊದಲು ಮನೆಯಲ್ಲಿಯೇ ಇರುತ್ತಿದ್ದ ಸೋಂಕಿತರನ್ನು ಮನೆ ಮನೆಗೆ ತೆರಳಿ ಕರೆದುಕೊಂಡು ಬಂದು ಕೋವಿಡ್ ಸೆಂಟರ್ ಗೆ ಸೇರಿಸುತ್ತಿರುವುದರಿಂದ ಗ್ರಾಮದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ
ಸುನೀಲ್ ಕುಮಾರ್
ಎರ್ರಂಗಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ

ಸಧ್ಯ ಇಲ್ಲಿ 94 ಜನರು ಇದ್ದಾರೆ. ಈಗಾಗಲೇ ಗುಣಮುಖರಾದ ಆರು ಜನರನ್ನು ಮನೆಗೆ ಕಳಿಸಿದೆ. ಕುರುಗೋಡು ತಾಲೂಕಿನ ಹಳ್ಳಿಗಳ ಜನ ಇಲ್ಲಿ ಬಂದು ದಾಖಲಾಗುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಾದರೆ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಕಳಿಸಲು ಅಂಬ್ಯುಲೆನ್ಸ್ ವ್ಯವಸ್ತೆಯೂ ಇದೆ
ಡಾ. ಶ್ರೀಕರ್
ಎರ್ರಂಗಳಿ ಕೋವಿಡ್ ಸೋಂಕಿತರ ಹಾರೈಕೆ ಕೇಂದ್ರದ ವೈದ್ಯಾಧಿಕಾರಿ

ಹಳ್ಳಿಗಳ ಜನತೆಗಾಗಿ ಈ ಕೇಂದ್ರ ಆರಂಭಿಸಿದೆ. ಕೇಂದ್ರದಲ್ಲಿನ ರೋಗಿಗಳಿಗೆ ದಿನಾಲು ಎಲ್ಲಾರೀತಿ ಪರೀಕ್ಷೆ ಮಾಡಲಿದೆ. ಉತ್ತಮ ವ್ಯವಸ್ಥೆ ಒದಗಿಸಿದ್ದು ರೋಗಿಗಳು ಗುಣಮುಖರಾಗುತ್ತಿದ್ದಾರೆನ್ನುತ್ತಾರೆ.
ಸುನೀಲ
ಕೊಳ್ಳಗಲ್ಲಿ ಗ್ರಾಮದ ಕೋವಿಡ್ ರೋಗಿಗಳ ಹಾರೈಕೆ ಕೇಂದ್ರದ ನೋಡಲ್ ಅಧಿಕಾರಿ


ಕೋವಿಡ್ ಸೆಂಟರ್ ಬೇಕಿಲ್ಲ ಪರಿಕರ ಕೊಡಿ
ಸಧ್ಯ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‍ಗಳ ಕೊರತೆ ಇಲ್ಲ. ಅಷ್ಟೇ ಅಲ್ಲ. ಅವುಗಳಲ್ಲಿ ಸೋಂಕಿತರನ್ನು ದಾಖಲಿಸಲು ಬೆಡ್‍ಗಳ ಕೊರತೆಯೂ ಇಲ್ಲದಾಗಿದೆ.ಈಗ ಇರುವ ಸಮಸ್ಯೆ ಎಂದರೆ ಸಧ್ಯ ಬುತೇಖ ಕೋವಿಡ್ ಕೇರ್ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯಕೀಯ ಮತ್ತು ಡಿ.ಗ್ರೂಪ್ ನೌಕರರ ಸಮಸ್ಯೆ. ಇದು ಅಲ್ಲಲ್ಲಿ ಕಂಡು ಬರುತ್ತಿದೆ.
ಇನ್ನು ಸೋಂಕಿತರ ಪರೀಕ್ಷೆಗೆ ಕೋವಿಡ್ ಕೇರ್ ಸೆಂಟರ್ ಮತ್ತು ಹಳ್ಳಿಗಳಲ್ಲಿ ಮನೆ ಮನೆಗೆ ಪರಿಶೀಲನೆಗೆ ತೆರಳುವ ಆಶಾ ಅವರಿಗೆ ಆಕ್ಸಿ ಮೀಟರ್, ಗ್ಲೌಸ್, ಸ್ಯಾನಿಟೈಸರ್. ಇದನ್ನು ಜಿಲ್ಲಾಡಳಿತ ನೀಡುತ್ತಿದ್ದರೂ ಅದು ಕಡಿಮೆ ಪ್ರಮಾಣದಲ್ಲಿದೆ.
ಕೋವಿಡ್ ಕೇರ್ ಸೆಂಟರ್ ತೆರೆದು ಪ್ರಚಾರ ಪಡೆಯಬೇಕೆಂದು ಬಯಸುವವರು, ಅದು ಬಿಟ್ಟು ಈಗ ಅವಶ್ಯ ವಿರುವ ಆಕ್ಸಿಜನ್ ಕಂನ್ಸಂಟ್ರೇಟರ್ಸ್, ಆಕ್ಸಿ ಮೀಟರ್, ಗ್ಲೌಸ್, ಸ್ಯಾನಿಟೈಸರ್ ನೀಡಿ ತಮ್ಮ ದಾನಗುಣದ ಪ್ರದರ್ಶನ ಮತ್ತು ತಾವು ಮಾಡಿದ ಸೇವಾ ಕಾರ್ಯಕ್ಕೆ ರಾಜಕೀಯ ಮಾಡದೆ ಪ್ರಚಾರವನ್ನು ಪಡೆಯಬಹುದಾಗಿದೆ.
ಈಗಾಗಲೇ ಖಾಸಗಿಯವರು ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‍ಗಳಿಗೆ ಈಗ ಸೋಂಕಿತರು ಇಲ್ಲದಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಅಲ್ಲಿ ಇದ್ದಾರೆ. ಹತ್ತಾರು ಬೆಡ್‍ಗಳು ಖಾಲಿ ಇವೆ.