
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.15: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಜನತೆ 77 ನೇ ಸ್ವಾತಂತ್ರ್ಯೊತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ಪ್ರಧಾನ ಸಮಾರಂಭ ನಗರದ ವಿಮ್ಸ್ ಮೈದಾನದಲ್ಲಿ ನಡೆದು ಅಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ. ಪೊಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾದಳ, ಶಾಲಾ ಕಾಲೇಜು ಮಕ್ಕಳಿಂದ ಕೂಡಿದ 38 ತಂಡಗಳಿಂದ ಫಥಸಂಚಲನೆಯಲ್ಲಿ ಧ್ವಜವಂದನೆ ಸ್ವೀಕರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.
ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಹೋರಾಟಗಾರರ ಪಾತ್ರವನ್ನು ಸ್ಮರಿಸಿದ ಸಚಿವರು ದೇಶದ ಸಮಗ್ರ ಐಕ್ಯತೆಗಾಗಿ ಪ್ರತಿಯೊಬ್ವರೂ ಶ್ರಮಿಸಬೇಕು ಎಂದರು.
ಬಳ್ಳಾರಿ ಜಿಲ್ಲೆಯಲ್ಲೂ ಪ್ರಧಾನ ಮಂತ್ರಿ ಜಿಲ್ಲಾ ಖನಿಜ ಪ್ರತಿಷ್ಟಾನ 2016 ರಿಂದ ಆರಂಭಗೊಂಡಿದ್ದು. ಜಿಲ್ಲೆಯಲ್ಲಿ ಇಲ್ಲಿಯವರೆಗೂ ರೂ. 2270.46 ಕೋಟಿಗಳ ಮೊತ್ತವನ್ನು ಡಿ.ಎಂ.ಎಫ್ ವಂತಿಗೆಯಾಗಿ ಸಂಗ್ರಹವಾಗಿರುತ್ತದೆ. ಈವರೆಗೂ 6 ಕ್ರಿಯಾ ಯೋಜನೆಗಳಲ್ಲಿನ ಕಾಮಗಾರಿಗಳಿಗೆ ರೂ. 1593.68 ಕೋಟಿಗಳಿಗೆ ಅನುಮೋದಿಸಿ, 1407 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ರೂ. 597.93 ಕೋಟಿಗಳ ಮೊತ್ತವನ್ನು ವೆಚ್ಚ ಮಾಡಲಾಗಿರುತ್ತದೆ. ಈ ಕಾಮಗಾರಿಗಳಲ್ಲಿ 989 ಪೂರ್ಣಗೊಂಡಿದ್ದು, 169 ಪ್ರಗತಿ ಹಂತದಲ್ಲಿರುತ್ತವೆ ಹಾಗೂ 77 ಕಾಮಗಾರಿಗಳು ಟೆಂಡರ್ ಹಂತದಲ್ಲಿರುತ್ತವೆ.
ಅನುಮೋದಿಸಲಾದ ಕ್ರಿಯಾ ಯೋಜನೆಗಳಲ್ಲಿ ಆರೋಗ್ಯ ವಲಯಕ್ಕೆ ರೂ. 20001 ಕೋಟಿಗಳು, ಕುಡಿಯುವ ನೀರಿನ ವಲಯಕ್ಕೆ ರೂ. 383,00 ಕೋಟಿಗಳು, ಶೈಕ್ಷಣಿಕ ವಲಯಕ್ಕೆ ರೂ. 247.80 ಕೋಟಿಗಳು, ಮೂಲಭೂತ ಸೌಕರ್ಯಗಳಿಗೆ ರೂ. 448.14 ಕೋಟಿಗಳು, ನೀರಾವರಿ ಮತ್ತು ನೈರ್ಮಲ್ಯ ವಲಯಕ್ಕೆ ಒಟ್ಟು ರೂ. 147,07 ಕೋಟಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಅಭಿವೃದ್ಧಿ, ಕೌಶಲಾಭಿವೃದ್ಧಿ ವಲಯ, ಪರಿಸರ ರಕ್ಷಣೆ ಮತ್ತು ಇತರೆ ಒಟ್ಟು ರೂ. 167.53 ಕೋಟಿಗಳ ಮೊತ್ತದ ವಿವಿಧ ಕಾಮಗಾರಿಗಳನ್ನು ಅನುಮೋದಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
ಡಿ.ಎಂ.ಎಫ್ ಅಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಎಲ್ಲಾ ವಿಭಾಗದಲ್ಲಿಯೂ ಮೇಲ್ದರ್ಜೆಗೆ ಏರಿಸುವ ಕಾಯಕಲ್ಪ ಯೋಜನೆ, ಕಂಪ್ಲಿ ಹಾಗೂ ಕುರುಗೋಡು ತಾಲ್ಲೂಕು ಕೇಂದ್ರಗಳಲ್ಲಿ ರೂ. 40,00 ಕೋಟಿಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು ನಿರ್ಮಿಸುವ ಕಾಮಗಾರಿಗಳು, ಉಳಿದ ಆಸ್ಪತ್ರೆಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳನ್ನು ಮತ್ತು ಅಂಬ್ಯೂಲೆನ್ಸ್ ನೀಡುವ ಯೋಜನೆ, ಸಂಗನಕಲ್ ಎಸ್.ಟಿ.ಪಿ ಉನ್ನತೀಕರಣ, ಬಳ್ಳಾರಿ ನಗರದಲ್ಲಿ ಆರೋಗ್ಯ ಸೌಧ ನಿರ್ಮಾಣ – ವಿವಿಧ ಶಾಲಾ ಮತ್ತು ಕಾಲೇಜುಗಳ ಅಭಿವೃದ್ಧಿ ಕೈಗೊಂಡಿದೆ.
ಬಳ್ಳಾರಿ ನಗರದಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ಹಾಕಿ ಟರ್ಫ್ ಅಥ್ಲೆಟಿಕ್ಸ್ ಸಿಂಥಟಿಕ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿರುತ್ತದೆ. ಸ್ಟೇಡಿಯಂ ಹತ್ತಿರ ಉತ್ತಮವಾದ ನೀರಿನ ಕೆರೆಯನ್ನು ನಿರ್ಮಿಸಲಾಗಿದ್ದು, ಬಳ್ಳಾರಿ ನಗರದ ನಾಗರೀಕರಿಗೆ ಬಳಕೆಗೆ ಇದು ಅನುಕೂಲಕರವಾಗಿರುತ್ತದೆ.
ಬಳ್ಳಾರಿ ನಗರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಈಗಾಗಲೇ “ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಸಿಯೇಷನ್ ಜೊತೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಸ್ಟೇಡಿಯಂ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗದವರ ಏಳಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಪರಿಶಿಷ್ಟ ವರ್ಗದವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗಾಗಿ ಇಲಾಖೆಯು ಶ್ರಮಿಸುತ್ತಿದೆಂದರು.
ಅಷ್ಟೇ ಅಲ್ಲದೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.
ಸಮಾರಂಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಜಾನಕಿ, ಡಿಸಿ ಪ್ರಶಾಂತ್ ಕುಮಾರ್ ಮಿಶ್ರ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಜಿ.ಪಂ. ಸಿಈಓ ಶರಣಪ್ಪ ಸಂಕನೂರು, ಪಾಲಿಕೆ ಆಯುಕ್ತ ಎಂ.ಎನ್.ರುದ್ರೇಶ್ ಮೊದಲಾದವರು ಇದ್ದರು. ಪಥ ಸಂಚಲನೆಯಲ್ಲಿ ಅಯ್ಕೆಯಾದ ತಂಡಗಳಿಗೆ ಬಹುಮಾನ ವಿತರಿಸಲಾಯ್ತು.