ಗಣಿನಾಡಿನಲ್ಲಿ ರಾಜ್ಯೋತ್ಸವ ಆಚರಣೆ
ರಂಜಾನಸಾಬ್ ಪುನೀತ್ ಪುತ್ಥಳಿ ಸ್ಥಾಪನೆ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.01: ನಗರದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ಪೈಲ್ವಾನ್ ರಂಜಾನ್ ಸಾಬ್ ಮತ್ತು ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಗರದಲ್ಲಿ ಸ್ಥಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಘೋಷಣೆ ಮಾಡಿದ್ದಾರೆ.
ಅವರು ಇಂದು ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ 67 ನೇ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ, ತಾಯಿ ಭೂವನೇಶ್ವರಿ ಭಾವಚಿತ್ರಕ್ಕೆ  ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದವರನ್ನು ಸ್ಮರಿಸಿ.  ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್ ಅವರ ಪುತ್ಥಳಿ ಈಗಾಗಲೇ ಸಿದ್ದಗೊಂಡಿದ್ದು ಎಲ್ಲಿ ಸ್ಥಾಪನೆ ಮಾಡಬೇಕೆಂಬ ಬಗ್ಗೆ ಸಮಾಲೋಚನೆ ನಡೆದಿದೆ. ಸಧ್ಯದಲ್ಲೇ ಬಳ್ಳಾರಿ ನಗರದ ಒಂದು ಕಡೆ ಸ್ಥಾಪನೆ ಮಾಡಲಿದೆ. ಅದೇ ರೀತಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಪುತ್ಥಳಿಯನ್ನು ಸಿದ್ದಪಡಿಸುತ್ತಿದ್ದು ಅದನ್ನು ಸಹ ಸ್ಥಾಪಿಸಲಿದೆಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿದಂ ಜ್ಯೋತಿಯನ್ನು ಸಚಿವರು ಬರಮಾಡಿಕೊಂಡರು. ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಚಿವರು ಬಹುಮಾನ ವಿತರಿಸಿದರು. ಸಂಸದ ವೈ.ದೇವೇಂದ್ರಪ್ಪ. ಶಾಸಕ ಗಿ.ಸೋಮಶೇಖರ ರೆಡ್ಡಿ, ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು, ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಬಸಲಿಂಗನಗೌಡ, ಡಿಸಿ ಪವನ್ ಕುಮಾರ್ ಮಾಲಪಾಟಿ, ಎಸ್ಪಿ ರಂಜಿತ್ ಕುಮಾರ್, ಜಿಪಂ ಸಿಇಓ ಲಿಂಗಮೂರ್ತಿ, ಎಡಿಸಿ ಪಿಸಿ ಮಂಜುನಾಥ್, ಪಾಲಿಕೆ ಆಯುಕ್ತ ರುದ್ರೇಶ್, ತಹಸಿಲ್ದಾರ್ ವಿಶ್ವನಾಥ್ ಮೊದಲಾದವರು ಇದ್ದರು.
ಸಮಾರಂಭದ ನಂತರ ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ರಾಜ್ಯದ ಅಭಿವೃದ್ದಿಯನ್ನು ಪ್ರತಿಬಿಂಬಿಸುವ ವಿವಿಧ ಇಲಾಖೆಗಳ ಮತ್ತು ನಾಡಿನ ಗಣ್ಯರ ವೇಷ ಧರಿಸಿದ ಮಕ್ಕಳ ಸ್ಥಭ್ದಚಿತ್ರಗಳ ಮೆರವಣಿಗೆ, ಡೊಳ್ಳು. ಸಮಾಳ, ಗೊಂಬೆ ಕುಣಿತ, ವೀರಗಾಸೆ ನೃತ್ಯ ಮೊದಲಾದ ಕಲಾ ತಂಡಗಳೊಂದಿಗೆ ನಗರದಲ್ಲಿ ಸಾಗಿತು.