ಗಣಿನಾಡಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವ
ಸರ್ಕಾರಿ ಕಾಲೇಜಿನ ಎಲ್ಲಾ ಮಕ್ಕಳಿಗೂ 371ಜೆ ಪ್ರಮಾಣ ಪತ್ರ – ಮಾಲಪಾಟಿ


ಬಳ್ಳಾರಿ, ಸೆ.17- ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ  ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರ ಗೈರು ಹಾಜರಿಯಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ  ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ. ಜಿಲ್ಲಾ ಸಶಸ್ತ್ರ ಪೋಲೀಸ್ ಮೀಸಲು ಪಡೆಯಿಂದ ಪರೇಡ್ ವಂದನೆ ಸ್ವೀಕರಿಸಿದರು.
ನಂತರ ನಿಜಾಮರ ಆಡಳಿತದಿಂದ ಕಲ್ಯಾಣ ಕರ್ನಾಟಕ ವಿಮೋಚನೆಗೆ ಕಾರಣರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ವಿನೋಚನಾ ಹೋರಾಟದ ಬಗ್ಗೆ ವಿವರಿಸುತ್ತ, ರಜಾಕರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ನಿಜಾಮರ ಆಡಳಿತ ಪ್ರದೇಶವನ್ನು ಉಕ್ಕಿನ ಮನುಷ್ಯ ಸರ್ದಾರ ವಲ್ಲಭಬಾಯಿ ಪಾಟೀಲರ ದಿಟ್ಟತನದಿಂದ ಕೈಗೊಂಡ ಪೋಲೀಸ್ ಕಾರ್ಯಾಚರಣೆಯಲ್ಲಿ ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ  1948 ಸೆಪ್ಟೆಂಬರ್ 17ರಂದು ಶರಣಾದರು.
ಅಂದಿನಿಂದ ಈ ಭಾಗಗಳು ರಾಜ್ಯದ ಇತರ ಭಾಗಗಳಂತೆ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಯಿತು. ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಈ ಪ್ರದೇಶ ಗಮನಾರ್ಹ ಕೊಡುಗೆ ನೀಡಿದೆಂದರು.
ಸಂವಿಧಾನದ 371 ಜೆ ಕಲಂ ನಡಿ ಕಲ್ಯಾಣ ಕರ್ನಾಟಕದ ಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 80 ಮೀಸಲಾತಿ ದೊರೆಯುತ್ತಿದೆ. ಇದರ ಲಾಭ ಪಡೆಯಲು ಸರ್ಕಾರಿ ಕಾಲೇಜುಗಳಲ್ಲಿ ಓದುವ ಎಲ್ಲಾ ಮಕ್ಕಳಿಗೆ ಅವರವರು ಓದುತ್ತಿರುವ ಕಾಲೇಜುಗಳಲ್ಲಿಯೇ ಈ 371ಜೆ ಪ್ರಮಾಣಪತ್ರವನ್ನು ವಿತರಿಸುವ ಯೋಜನೆಯನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ. ಇದರಡಿ ಕಳೆದ ಮಾರ್ಚ್ 1 ರಿಂದ ಇಲ್ಲಿಯವರೆಗೆ ಒಟ್ಟು 18,689 ಅರ್ಜಿಗಳನ್ನು ಸ್ವೀಕರಿಸಿ  ಅವುಗಳಿಗೆ ಅನುಮೋದನೆ ನೀಡಲಾಗಿದೆ. ಕಳೆದ ಸಾಲಿಗೆ ಇದನ್ನು ಹೋಲಿಸಿದರೆ ಮೂರು ಪಟ್ಟು ಹೆಚ್ಚು 371 ಜೆ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ದು ಇತರೇ ಜಿಲ್ಲೆಗಳಿಗೂ ಮಾದರಿಯಾಗಿದೆಂದು ಜಿಲ್ಲೆಯಲ್ಲಿನ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದೊಂದಿಗೆ 39 ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ರಾಷ್ಟ್ರೀಯ ಆರೋಗ್ಯ ಮಿಷನ್‍ರವರ ಕಾಯಕಲ್ಪ ಮಾದರಿಯಲ್ಲಿ 12.98 ಕೋಟಿಗಳಲ್ಲಿ  ಅಭಿವೃಧ್ಧಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ  ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಸಹಕಾರಿಯಾಗಿದೆಂದರು.
 ತಂದೆಯ ಹೋರಾಟದ ಸ್ಮರಣೆ:
ಸಮಾರಂಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಧ್ಯಕ್ಷತೆವಹಿಸಿ ಮಾತನಾಡುತ್ತ, ರಜಾಕರ ವಿರುದ್ದ ಹೋರಾಟದಲ್ಲಿ ಪೊಲೀಸ್ ಪೇದೆಯಾಗಿದ್ದ ತಮ್ಮ ತಂದೆ ಚಂಗಾರೆಡ್ಡಿ ಅವರು ಗುಡ್ಡದಲ್ಲಿ ಸೆಣಸುವಾಗ ಬೆರಳು ಕಳೆದುಕೊಂಡಿದ್ದನ್ನು ಸ್ಮರಿಸಿದರು.  ಕಲ್ಯಾಣ ಕರ್ನಾಕಟ ಮಂಡಳಿಯಿಂದ ಈ ಪ್ರದೇಶದ ಅಭಿವೃದ್ದಿಗೆ ಸರ್ಕಾರ 15 ಸಾವಿರ ಕೋಟಿ ರೂ ನೀಡಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಮುಖ್ಯಮಂತ್ರಿಗಳು 15 ಸಾವಿರ ಕೋಟಿ ರೂ ನೀಡುವುದಾಗಿ ಹೇಳಿದ್ದಾರೆಂದರು. ಸಂವಿಧಾನದ 371 ಜೆ ಕಲಂ ನಡಿ ದೊರೆಯುವ ಸೌಲಭ್ಯವನ್ನು ಯುಜನತೆ ಉತ್ತಮ ವಿದ್ಯಾಭಾಸದ ಮೂಲಕ ಸದುಪಯೋಗ ಪಡೆಸಿಕೊಳ್ಳಬೇಕೆಂದರು. ನಮ್ಮೆಲ್ಲರ ಆಶೆಯದಂತೆ ಹಗರಿಯಲ್ಲಿ ಕೃಷಿ ಪದವಿ ಕಾಲೇಜ್ ಈ ವರ್ಷ ಮಂಜೂರಾಗಿದ್ದು 30 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಿದೆ. ಇದನ್ನು 60 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಮುಂದಿನ ಹೋರಾಟ ನಡೆಯಲಿದೆಂದರು.
ಈ ಸಂಧರ್ಭದಲ್ಲಿ ಉತ್ಸವದ ಅಂಗವಾಗಿ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕ ಬಸವರಾಜ್ ಅವರು ಕಲ್ಯಾಣ ಕರ್ನಾಟಕ ರಜಾಕರ ಆಡಳಿತದಿಂದ  ವಿಮೋಚನೆ ಹೊಂದಿದ ಕುರಿತು ಉಪನ್ಯಾಸ ನೀಡಿದರು.
ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಪ್ರಸಾದ್, ಮೇಯರ್ ಎಂ.ರಾಜೇಶ್ವರಿ. ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಿಗೇರಿ ಪನ್ನರಾಜ್, ಎಡಿಸಿ ಪಿ.ಸಿ.ಮಂಜುನಾಥ, ಎಸ್ಪಿ ಸೈದುಲ ಅಡಾವತ್, ನಗರ ಪಾಲಿಕೆ ಆಯುಕ್ತ ರುದ್ರೇಶ್, ಸಹಾಯಕ ಆಯುಕ್ತ ಡಾ.ಆಕಾಶ್ ಶಂಕರ್, ತಹಸಿಲ್ದಾರ್ ವಿಶ್ವನಾಥ್ ಮೊದಲಾದವರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಸ್ವಾಗತ ಮಾಡಿದರೆ. ದೊಡ್ಡಬಸವ ಗವಾಯಿ ಮತ್ತು ತಂಡದಿಂದ ನಾಡಗೀತೆಗಾಯನ ನಡೆಯಿತು. ವಿನೋದ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Attachments area