ಗಣಿನಾಡಲ್ಲಿ 2439 ಬಿಪಿಎಲ್ ಕಾರ್ಡು ಅನರ್ಹ ತಪ್ಪು ಮಾಹಿತಿ ನೀಡಿದವರಿಗಿಲ್ಲ ಶಿಕ್ಷೆ

ಬಳ್ಳಾರಿ:ಜೂ.4- ಆರ್ಥಿಕವಾಗಿ ಸಬಲರಾಗಿದ್ದರೂ ಆದ್ಯತಾ ವಲಯದ ಅಂತ್ಯೋದಯ, ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವ ಫಲಾನುಭವಿಗಳಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಬಿಸಿ ಮುಟ್ಟಿಸುತ್ತಿದೆ. ಈ ರೀತಿಯ ಪಡಿತರ ಚೀಡಿಗಳನ್ನು ಪಡೆದಿದ್ದವರ ಆದಾಯ ತೆರಿಗೆ ಪಾವತಿಯನ್ನು ಆಧಾರ್ ಲಿಂಕ್ ಮೂಲಕ ಮಾಹಿತಿ ಪಡೆದು ಅವರ ಪಡಿತರ ಚೀಟಿಗಳನ್ನು ಎಪಿಎಲ್‍ಗೆ ಪರಿವರ್ತಿಸಿದೆ ಹೊರೆತು. ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡು ಪಡೆದು ಈವರೆಗೆ ಉಚಿತವಾಗಿ ಧಾನ್ಯ ಪಡೆದವರಿಗೆ ಮಾತ್ರ ಶಿಕ್ಷೆ, ದಂಡ ಯಾವುದೂ ಇಲ್ಲವಾಗಿದೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 66 ಸಾವಿರದ 500 ಅಂತ್ಯೋದಯ, 5,29,865 ಬಿಪಿಎಲ್, 63 ಸಾವಿರದ 913 ಎಪಿಎಲ್ ಪಡಿತರ ಚೀಟಿಗಳು ವಿತರಣೆಯಾಗಿವೆ. ಆರ್ಥಿಕವಾಗಿ ಸದೃಢವಾಗಿದ್ದೂ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಸಾವಿರಾರು ಕಟುಂಬಗಳು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಎಚ್ಚೆತ್ತಕೊಂಡಿರುವ ಆಹಾರ ಇಲಾಖೆ, ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಹೊಂದಿದವರ ಆಧಾರ್ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯೊಂದಿಗೆ ಹಂಚಿಕೊಂಡು. ಯಾರು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ.
ಅಂತಹವರಲ್ಲಿ ಅಂತ್ಯೋದಯ 145, ಬಿಪಿಎಲ್ 2439 ಸೇರಿ ಒಟ್ಟು 2584 ಪಡಿತರ ಚೀಟಿಗಳನ್ನು ಅನರ್ಹ ಎಂದು ಗುರುತಿಸಿದೆ. ಜತೆಗೆ ಅನರ್ಹರು ಪಡೆದಿರುವ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂತಿರುಗಿಸುವಂತೆ ಮತ್ತೊಮ್ಮೆ ಜೂ.30ರವರೆಗೆ ಗಡುವು ನೀಡಿದೆ ಇಲಾಖೆ.
2549 ಎಪಿಎಲ್‍ಗೆ ಪರಿವರ್ತನೆ:
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬಳ್ಳಾರಿ ತಾಲೂಕು 1257, ಹಡಗಲಿ 78, ಹ.ಬೊ.ಹಳ್ಳಿ 79, ಹೊಸಪೇಟೆ 522, ಕೂಡ್ಲಿಗಿ 137, ಸಂಡೂರು 224, ಸಿರುಗುಪ್ಪ 153, ಹರಪನಹಳ್ಳಿ 134 ಸೇರಿ ಅಂತ್ಯೋದಯ 145, ಬಿಪಿಎಲ್ 2439 ಸೇರಿ ಒಟ್ಟು 2584 ಪಡಿತರ ಚೀಟಿಗಳನ್ನು ಅನರ್ಹ ಎಂದು ಗುರುತಿಸಿದೆ.
ಈ ಪೈಕಿ ಹಗರಿಬೊಮ್ಮನಹಳ್ಳಿಯ 35 ನ್ನು ಹೊರತುಪಡಿಸಿ ಉಳಿದಂತೆ 2549 ಪಡಿತರ ಚೀಟಿಗಳನ್ನು ಎಪಿಎಲ್‍ಗೆ ಪರಿವರ್ತಿಸಿದೆಯಂತೆ.
ಇವರು ಅನರ್ಹರು:
ಸರ್ಕಾರ, ಅನುದಾನಿತ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳ ಖಾಯಂ ನೌಕರರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ, ನೀರಾವರಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಸ್ವಂತ ಮನೆ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಸೇರಿ ನಾಲ್ಕು ಚಕ್ರ ಹೊಂದಿರುವ ಎಲ್ಲ ಕುಟುಂಬಗಳು, ಪ್ರತಿ ತಿಂಗಳು 150 ಯೂನಿಟ್‍ಗಿಂತಲೂ ಹೆಚ್ಚು ವಿದ್ಯುತ್ ಬಳಕೆ ಮಾಡುವ ಕುಟುಂಬಗಳು, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೋಂದಿರುವ ಕುಟುಂಬಗಳಿಗೆ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯಲು ಅನರ್ಹ. ಇಂತಹ ಕುಟುಂಬಗಳಿಗೆ ಎಪಿಎಲ್ ಪಡಿತರ ಕಾರ್ಡ್‍ಗಳನ್ನು ನೀಡುತ್ತಿದೆ.
1500 ಪಡಿತರ ಕಾರ್ಡು ವಾಪಸ್:
ಆಹಾರ ಇಲಾಖೆ ಈ ಹಿಂದೆಯೇ ಒಮ್ಮೆ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿದ್ದ ಅನರ್ಹರು ಹಿಂತಿರುಗಿಸುವಂತೆ ಕೋರಿತ್ತು. ಇಲ್ಲದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಸಿತ್ತು. ಆಗ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿದ್ದ ಸರ್ಕಾರಿ ನೌಕರರು, ಆರ್ಥಿಕ ಸದೃಢರು ಇತರರು ಸ್ವಯಂ ಪ್ರೇರಣೆಯಿಂದ 1500 ಪಡಿತರ ಚೀಟಿಗಳನ್ನು ಹಿಂದುರುಗಿಸಿದ್ದರು. ಅದರಂತೆ ಇದೀಗ ಪುನಃ ಮತ್ತೊಮ್ಮೆ ಹಿಂದುರುಗಿಸುವಂತೆ ಪ್ರಕಟಣೆ ಹೊರಡಿಸಿದ್ದು, ಅವಧಿಯನ್ನು ಜೂ.30ರ ವರೆಗೆ ವಿಸ್ತರಿಸಲಾಗಿದೆ. ಎಷ್ಟರ ಮಟ್ಟಿಗೆ ಅನರ್ಹರು ತಮ್ಮ ಕಾರ್ಡುಗಳನ್ನು ಹಿಂದಿರುಗಿಸಲಿದ್ದಾರೆ ಎಂಬುದನ್ನುಕಾದು ನೋಡಬೇಕಾಗಿದೆ.