ಗಣಿನಾಡಲ್ಲಿ ಮತದಾನ ಬಿರುಸು

ಬಳ್ಳಾರಿ ಡಿ ೨೨ : ಜಿಲ್ಲೆಯ ಬಳ್ಳಾರಿ , ಸಿರಗುಪ್ಪ, ಕುರುಗೋಡು, ಕಂಪ್ಲಿ ಮತ್ತು ಹೊಸಪೇಟೆ ತಾಲೂಕಿನ ೮೭ ಗ್ರಾಮ ಪಂಚಾಯತಿಯಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ ೭ ರಿಂದ ಆರಂಭಗೊಂಡು ಬಿರುಸಿನ ಮತ್ತು ಶಾಂತಿಯುತ ಮತದಾನ ನಡೆಯಿತು.
ಈ ಐದು ತಾಲೂಕಿನಲ್ಲಿ ಒಟ್ಟು ಸದಸ್ಯ ಸ್ಥಾನಗಳು ೧೭೩೮ ಇದ್ದು ಇದರಲ್ಲಿ ೩೫ ಸ್ಥಾನಗಳಿಗೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ.
೩೩೦ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು ಉಳಿದ ೧೩೭೩ಸ್ಥಾನಗಳಿಗೆ ೩೨೯೦ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
೭೦೧ ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು ಪ್ರತಿ ಮತಗಟ್ಟೆ ಮುಂಭಾಗದಲ್ಲೇ ಸ್ಯಾನಿಟೈಸರ್ ನೀಡಿ, ವೀವರ್ ಚಕ್ ಮಾಡಲಾಗುತ್ತಿದೆ, ಮಾಸ್ಕ್ ಧರಿಸಿದವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಾಗುತ್ತಿದೆ.
ಮಾಗಿಯ ಚಳಿಯಲ್ಲೂ ಬೆಳಿಗ್ಗೆ ಏಳಗಂಟೆಯಿಂದಲೇ ಮತದಾರರು ಮತಗಟೆಗಳತ್ತ ಸಾಗಿ ಬಂದರು.
ವೃದ್ದರು, ಅಂಗವಿಕಲರೂ ಮತದಾನಕ್ಕೆ ಬಂದಾಗ ಅವರಿಗೆ ಇತರರ ಸಹಾಕರಿಂದ ಮತದಾನಕ್ಕೆ ಅವಕಾಶ ನೀಡಲಾಯಿತು.
ಮೊದಲ ಎರೆಡು ತಾಸು ೯ ಗಂಟೆ ವೇಳೆಗೆ ಶೇ.೧೨.೬ ರಷ್ಟು ಮತದಾನವಾಗಿತ್ತು. ಮದ್ಯಾಹ್ನ ೨ ಗಂಟೆ ವೇಳೆಗೆ ಶೇ.೬೫ ರಷ್ಟು ಮತದಾನವಾಗಿತ್ತು.
ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ೯೯ ವರ್ಷದ ವೃದ್ದೆ ಲಕ್ಷ್ಮಮ್ಮ ತನ್ನ ಮತಚಲಾಯಿಸಿದರು. ಅನೇಕ ವೃದ್ದರು, ವಿಕಲಚೇತನರರು ಇತರರ ಸಹಾಯದಿಂದ ಮತ ಚಲಾಯಿಸಿದ್ದು ಕಂಡು ಬಂತು.

ಮೊದಲ ಬಾರಿಗೆ:
ಪಂಚಾಯ್ತಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸದೇ ಅವಿರೋದ ಆಯ್ಕೆ ಮೂಲಕ ಅನ್ಯೋನ್ಯತೆ ಕಾಪಾಡಿಕೊಂಡು ಬಂದಿದ್ದ ಕಪ್ಪಗಲ್ಲು ಗ್ರಾಮ ಪಂಚಾಯ್ತಿಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧೆ ಏರ್ಪಟ್ಟು ಇಂದು ಮತದಾನ ನಡೆಯಿತು.
ಬಾಲಜಿ ನಗರ ಕ್ಯಾಂಪಿನ ಎರೆಡು ಸದಸ್ಯ ಸ್ಥಾನಗಳು ಸೇರಿ ಒಟ್ಟು ೧೯ ಸ್ಥಾನಗಳಿಗೆ ೬೨ ಜನ ಸ್ಪಾರ್ಧಕಣದಲ್ಲಿ ಇದ್ದಾರೆ.
ಗ್ರಾಮದಲ್ಲಿ ಹಿರಿಯರಲ್ಲಿನ ಒಗ್ಗಟ್ಟಿನ ಕೊರತೆ ಮತ್ತು ಯುವ ಸಮುದಾಯ ಚುನಾವಣೆಗೆ ಒಲವು ತೋರಿದ್ದರಿಮನದ ಮತದಾನ ನಡೆಯುತ್ತಿದೆ ಎಂದು ಸಂಜೆವಾಣಿಯೊಂದಿಗೆ ಮಾತನಾಡಿದ ಗ್ರಾಮದ ಮತದಾರ ಸುರೇಶ್ ಹೇಳಿದರು.