ಬೀದರ್ :ಜು.18: ಗಣಿತವನ್ನು ಸರಿಯಾಗಿ ಅರಿತು ಅಭ್ಯಾಸ ನಡೆಸಿದರೆ, ಬಹಳ ಸುಲಭವಾದ ವಿಷಯವಾಗಿದೆ ಎಂದು ಡಯಟ ಉಪ ಪ್ರಾಂಶುಪಾಲ ಎಂ.ಡಿ ಗುಲಸೀನ್ ಹೇಳಿದರು.
ನಗರದ ಅಗಸ್ತ್ಯ ಪ್ರತಿಷ್ಠಾನ, ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಲ್ಲಿ ನಡೆದ ಗಣಿತ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗಣಿತ ವಿಷಯ ಬೋಧನೆಗೆ ಪರಿಕಲ್ಪನೆಗಳ ತಿಳುವಳಿಕೆ ಅತ್ಯವಶ್ಯಕವಾಗಿದ್ದು, ಶಿಕ್ಷಕರು ಸರಳ ಬೋಧನೆ ವಿಧಾನ ತಿಳಿದು ಶಾಲೆಯ ತರಗತಿ ಕೋಣೆಯಲ್ಲಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಔರಾದ್ ಕ್ಷೇತ್ರ ಶಿಕ್ಷಣಾಧಿಕಾರಿ ಎಂಡಿ. ಮಕ್ಸೂದ್ ಮಾತನಾಡಿ, ಶಿಕ್ಷಕರು ವೃತ್ತಿ ಧರ್ಮವನ್ನು ಅನುಸರಿಸಬೇಕು. ಕ್ಲಿಷ್ಟಕರ ವಿಷಯಗಳು ನಮಗೆ ಅರ್ಥವಾಗಿಲ್ಲವೆಂದರೇ ಮಕ್ಕಳಿಗೆ ಬೋಧಿಸುವುದು ಕಷ್ಟ ಎಂದರು.
ಬೀದರ್ ಅಗಸ್ತ್ಯ ಫೌಂಡೇಶನ್ ಮುಖ್ಯಸ್ಥ ಬಾಬುರಾವ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಓದುವ ಮಕ್ಕಳಿಗೂ ಸ್ಪರ್ಧಾತ್ಮಕ ಯುಗದಲ್ಲಿ ನಾವು ಪ್ರತಿಯೊಂದು ಒದಗಿಸುವ ಅಗತ್ಯವಿದೆ. ಶಿಕ್ಷಕರು ಮತ್ತು ಮಕ್ಕಳಲ್ಲಿನ ವೈಜ್ಞಾನಿಕ ಚಿಂತನೆ ಮೂಡಿಸುವ ಉದ್ಧೇಶದಿಂದ ಅಗಸ್ತ್ಯ ಪ್ರತಿಷ್ಠಾನ ಹಲವು ಯೋಜನೆಗಳ ಮೂಲಕ ಕಾರ್ಯ ಪ್ರವೃತ್ತವಾಗಿದೆ ಎಂದರು.
ಡಯಟ ಹಿರಿಯ ಉಪನ್ಯಾಸಕ ಜಾಕೀರ್ ಹುಸೇನ್, ಡಿವೈಪಿಸಿ ಗೋಪಾಲರಾವ ಪಡುವಲಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಅಗಸ್ತ್ಯ ಫೌಂಡೇಶನ್ ಸಿಬ್ಬಂದಿ ಲಕ್ಷ್ಮೀ, ಸುಹಾಸಿನಿ, ಮಹೇಶ, ಬಾಲಾಜಿ ಅಮರವಾಡಿ, ಪ್ರಕಾಶ ದೇಶಮುಖ, ಪ್ರದೀಪ ಗುಬನೂರೆ ಸೇರಿದಂತೆ ಇನ್ನಿತರರಿದ್ದರು.