ಕಲಬುರಗಿ,ಜೂ.13:ಪ್ರಪಂಚದಲ್ಲಿ ಬಹಳಷ್ಟು ಮಂದಿ ಬದುಕಿದ್ದೂ ಸತ್ತಂತಿರುತ್ತಾರೆ. ಮತ್ತೆ ಕೆಲವರು ಬಹಳ ಅಪರೂಪವೆನ್ನುವಂತೆ ಭೌತಿಕವಾಗಿ ಕಾಲವಾಗಿದ್ದರೂ ವಿಸ್ಮಯದೋಪಾದಿಯ ತಮ್ಮ ಅದ್ಭುತ ಸಾಧನೆಯಿಂದ ಸಾವಿನ ನಂತರವೂ ಜಗತ್ತು ಇರುವ ತನಕವೂ ಶಾಶ್ವತವಾಗಿ ಬದುಕಿರುತ್ತಾರೆ. ಅಂಥವರಲ್ಲಿ ಮೊದಲ ಸಾಲಿನಲ್ಲೇ ಇರುವವರು ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್É ಎಂದು ಚಿಂತಕ, ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.
ಅವರು ಜೇವರ್ಗಿ ನಗರದ ವಿಜಯಪುರ ರಸ್ತೆಯಲ್ಲಿರುವ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಗಣಿತ ಪ್ರಯೋಗಾಲಯದಲ್ಲಿ ಗಣಿತದ ಆಕೃತಿಗಳನ್ನು, ಪರಿಕರಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ವಿವರಿಸುತ್ತಾ ಮಾತನಾಡಿದ ಅವರು, ಪ್ರಪಂಚದ ಹುಟ್ಟಿನಿಂದಲೂ ಅದರೊಟ್ಟಿಗೆ ಗಣಿತವೂ ಪ್ರಾರಂಭವಾಗಿ ಸಾಗಿ ಬಂದಿದೆ. ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಬೇಕೇ ಬೇಕು. ಗಣಿತವಿಲ್ಲದೆ ಬದುಕಿಲ್ಲ. ಗಣಿತವನ್ನು ಕಲಿತವರಿಗೆ ಉಳಿದ ವಿಷಯಗಳೆಲ್ಲಾ ನೀರು ಕುಡಿದಂತೆ. ಆದ್ದರಿಂದ ವಿದ್ಯಾರ್ಥಿಗಳು ರಾಮಾನುಜನ್‍ರಂತಹ ಗಣಿತಜ್ಞ ಮಹನೀಯರ ಬದುಕನ್ನು ಮಾದರಿಯಾಗಿಟ್ಟುಕೊಂಡು ಗಣಿತದ ಬಗ್ಗೆ ವಿಶೇಷ ಆಸಕ್ತಿ ಮತ್ತು ಒಲವನ್ನು ಹೊಂದಿ ಕಲಿಯಬೇಕೆಂದರು. ಗಣಿತ ಬಹಳ ಕಷ್ಟ ಅದು ಕಬ್ಬಿಣದ ಕಡಲೆ ಎಂಬ ಭಾವನೆ ಬಹಳಷ್ಟು ಮಂದಿಯಲ್ಲಿದೆ. ಆದರೆ ಕನಸು ಮನಸ್ಸಿನಲ್ಲೆಲ್ಲಾ ಅಂಕಿ ಸಂಖ್ಯೆಗಳನ್ನೇ ತುಂಬಿಕೊಂಡು ಗಣಿತವನ್ನೇ ಉಸಿರಾಗಿಸಿಕೊಂಡು ಗಣಿತ ಲೋಕದಲ್ಲಿ ಜಗತ್ತು ಕಂಡರಿಯದಂತಹ ಮಹದದ್ಭುತ ಸಾಧನೆ ಮಾಡಿ ಗಣಿತದಲ್ಲಿ ಅಗಣಿತವನ್ನು ಕಂಡಿದ್ದ ಗಣಿತ ದಾರ್ಶನಿಕ ಶ್ರೀನಿವಾಸ ರಾಮಾನುಜನ್ ಬಗ್ಗೆ ಅರಿತವರಾರೂ ಗಣಿತವನ್ನು ಕಬ್ಬಿಣದ ಕಡಲೆ ಎನ್ನಲಾರರು. ಬದಲಿಗೆ ಗಣಿತವೆಂಬುದು ಕಲ್ಲುಸಕ್ಕರೆ ಎಂದು ಖಂಡಿತವಾಗಿಯೂ ಬಾಯಿ ಚಪ್ಪರಿಸುತ್ತಾರೆ. ಕೇವಲ ಮೂವತ್ತೆರಡು ವರ್ಷಗಳು ಮಾತ್ರ ಬದುಕಿದ್ದ ಅಲ್ಪಾಯುಷಿಯಾದರೂ ಶ್ರೀನಿವಾಸ ರಾಮಾನುಜನ್ ಅವರು, ಗಣಿತದಲ್ಲಿ ನೂರು ಜನ್ಮಕ್ಕಾಗುವಷ್ಟು ಸಾಧನೆ ಮಾಡಿ ಅವರು ಎಂದೆಂದಿಗೂ ಜಗತ್ತಿನ ಗಣಿತ ಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆ ಬರೆದು ಭಾರತದ ಕೀರ್ತಿ ಪತಾಕೆಯನ್ನು ವಿಶ್ವದ ಉದ್ದಗಲಕ್ಕೂ ಹಾರಿಸಿದ್ದಾರೆ. ಹಾಗೆಯೇ ಗಣಿತ ಜಗತ್ತಿನಲ್ಲಿ ಅಮರರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ನಾಗಮ್ಮ, ರೇಷ್ಮಾ, ಮಹಾದೇವಿ ಎಸ್, ರಾಜೇಶ್ವರಿ, ಚಂದ್ರಕಲಾ, ರೇಣುಕಾ, ಆನಂದ್, ಸಚಿನ್, ವೀರೇಶ ಮುಂತಾದವರು ಹಾಜರಿದ್ದರು.