ಗಣಿತ ಕಲ್ಲುಸಕ್ಕರೆ ಆಗುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯ’


ಧಾರವಾಡ,ಮಾ.28: ಒತ್ತಾಯದ ಇಲ್ಲವೆ ನಿರುತ್ಸಾಹದ ಕಲಿಸುವಿಕೆಯ ಬದಲು ಅನುಭವಜನ್ಯ ಮತ್ತು ಕುತೂಹಲಭರಿತ ಬೋಧನಾ ಕ್ರಮ ಅಳವಡಿಸಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯ ಬದಲು ಕಲ್ಲು ಸಕ್ಕರೆಯಂತಾಗಬಲ್ಲವು ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಆಲಗೂರ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಆಶ್ರಯದಲ್ಲಿ ಜರುಗಿದ ‘ನಕ್ಕು ನಲಿ ಲೆಕ್ಕ ಕಲಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಗಣಿತ ಕಲಿಸುವಿಕೆಯಲ್ಲಿ ಮೊದಲು ಶಿಕ್ಷಕರಲ್ಲಿ ಆ ವಿಷಯದ ಆಸಕ್ತಿ ಹುಟ್ಟಬೇಕು, ನಂತರ ಕುತೂಹಲಕಾರಿಕ ಪ್ರಧಾನ ಅಂಶಗಳನ್ನೇ ಹಿನ್ನೆಲೆಯಾಗಿಟ್ಟುಕೊಂಡು ಬೋಧಿಸಿದಲ್ಲಿ ಎಲ್ಲ ವಿದ್ಯಾರ್ಥಿಗಳಲ್ಲೂ ಗಣಿತದ ಬಗ್ಗೆ ಆಸಕ್ತಿ ಹುಟ್ಟಬಲ್ಲದು ಎಂದು ಅವರು ಹೇಳಿದರು.
ಗಣಿತವನ್ನು ವಿಜ್ಞಾನದ ರಾಣಿ' ಎಂದೆ ಬಿಂಬಿಸಿದ ಪ್ರೊ. ಸಿದ್ದು ಪಿ. ಆಲಗೂರ ಅವರು ಗಣಿತ, ವಿದ್ಯಾರ್ಥಿಗಳ ಬದುಕಿನಲ್ಲೂ ಸಹ ಶಿಸ್ತನ್ನು ಬೋಧಿಸಬಲ್ಲದು ಎಂದು ಅವರು ಹೇಳಿದರು.ನಕ್ಕು ನಲಿ ಲೆಕ್ಕ ಕಲಿ’ ಪುಸ್ತಕವನ್ನು ಮುಕ್ತ ಮನಸಿನಿಂದ ಶ್ಲಾಘಿಸಿದ ಅವರು ಎಸ್.ಎಸ್.ಎಲ್.ಸಿ. ಹಂತದ ಎಲ್ಲರಿಗೂ ಸಹ ಇದು ವಿಶೇಷತಃ ಶಾಲೆ ಬಿಟ್ಟ ಮಕ್ಕಳಿಗೆ ಉತ್ತಮ ಪುಸ್ತಕ ಆಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ, ಶೈಕ್ಷಣಿಕ ವಿಷಯಗಳ ಸಂಪನ್ಮೂಲ ಗಣ್ಯರಾದ ಹಾಗೂ ಆಕಾಶವಾಣಿಯ ವಿಶ್ರಾಂತ ಹಿರಿಯ ಅಧಿಕಾರಿ ನಾಗೇಶ ಶಾನಭಾಗ ಮಾತನಾಡಿ, ಗಣಿತ ವಿಷಯದ ಬಗ್ಗೆ ಇತ್ತೀಚಿನ ಕನ್ನಡ ಕವಿಗಳೂ ಸಹ ಉದಾಸೀನ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಹಿಂದಿನ ಪ್ರಸಿದ್ಧ ಕವಿ ಜಿ.ಪಿ. ರಾಜರತ್ನಂ ಅವರು ಅಂಕಿ-ಸಂಖ್ಯೆಗಳನ್ನೆ ಗುರಿಯಾಗಿಸಿಕೊಂಡು ಬರೆದ ಮಕ್ಕಳ ಪದ್ಯ ಒಂದು ಎರಡು ಬಾಳೆಲೆ ಹರಡು'..... ಎಂದು ಉದಾಹರಿಸಿದರು. ಆದರೆ ಇಂಗ್ಲೀಷನಲ್ಲಿ ರ್ಯಾಮ್ಸಗಳ ಮೂಲಕ ಮಕ್ಕಳಲ್ಲಿ ಗಣಿತ ವಿಷಯದಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನಗಳು ಆಗುತ್ತಲೇ ಇವೆ. ಶಿಕ್ಷಕರಿಗೂ ಮನೆಪಾಠ ಅಗತ್ಯ ಎಂದು ಹೇಳಿದ ಅವರು ಗಣತ ವಿಷಯದಿಂದ ಮಾನಸಿಕ ಸಾಮಥ್ರ್ಯವೂ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು. ಪುಸ್ತಕ ಪರಿಚಯ ಮಾಡಿದ ಪೋಟೋಗ್ರಾಫಿ ಪರಿಣಿತ ಹಾಗೂ ಬರಹಗಾರ ಶಶಿ ಸಾಲಿ ಅವರು ಮಾತನಾಡಿ, ಹಿಂದಿನ ಪೀಳಿಗೆಯಲ್ಲಿ ಗಣಿತವನ್ನು ಮಕ್ಕಳಿಗೆ ಹೇಳಿಕೊಡುವಲ್ಲಿ ಅಂದಿನ ಶಿಕ್ಷಕರು ಬಳಸುತ್ತಿದ್ದ ಸಾಮಾನ್ಯ ರಂಜನೀಯ ಅಂಶಗಳನ್ನು ಸ್ಮರಿಸಿದರು. ಬಿಡಿಕಾಳು, ಹತ್ತರ ಗಂಟು ಮುಂತಾದ ಅಂಕಿಗಳನ್ನು ಹುಣಸೆ ಬೀಜಗಳ ಮೂಲಕ ಮಕ್ಕಳ ಮನದಲ್ಲಿ ಮನದಟ್ಟು ಮಾಡಿಕೊಡಲು ಅವರು ಪಡುತ್ತಿದ್ದ ಶ್ರಮ ಇಂದಿನ ಶಿಕ್ಷಕರಿಗೆ ಅನುಕರಣೀಯವಾಗಿದೆ ಎಂದ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದನಕ್ಕು ನಲಿ ಲೆಕ್ಕ ಕಲಿ’ ಈ ಪುಸ್ತಕ ತುಂಬಾ ಕುತೂಹಲಕಾರಿಯಾಗಿದ್ದು, ಎಳೆಯ ಮಕ್ಕಳಿಂದ ಹಿಡಿದು ಪ್ರೌಢರಿಗೂ ಸಹ ಹಿಡಿಸುವಂತದ್ದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ವಹಿಸಿದ್ದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಿವಾನಂದ ಭಾವಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಮಂಟಪದ ಸಲಹಾ ಸಮಿತಿ ಸದಸ್ಯ ಮಹಾಂತೇಶ ನರೇಗಲ್ಲ ಆಭಾರ ಮನ್ನಿಸಿದರು. ಸಭೆಯಲ್ಲಿ ಬಳ್ಳಾರಿ ವಿ.ವಿ. ರಜಿಸ್ಟ್ರಾರ ಡಾ. ಶಶಿಕಾಂತ ಉಡಿಕೇರಿ, ಸಂಘದ ಗೌರವಾಧ್ಯಕ್ಷ ಡಾ. ಶಾಂತಿನಾಥ ದಿಬ್ಬದ, ವಿಜ್ಞಾನ ಮಂಪಟದ ಸಲಹಾ ಸಮಿತಿ ಸದಸ್ಯ ವಸಂತ ಅರ್ಕಾಚಾರ, ಡಾ. ಲಿಂಗರಾಜ ರಾಮಾಪೂರ, ಹಿರಿಯ ಶಿಕ್ಷಕರಾದ ರಾಧಾ ಎನ್. ಮಠ, ಶೈಲಜಾ ಎಂ. ಪಾಟೀಲ, ಶಾಂತಕ್ಕ ಕ್ವಾಟಿಹಳ್ಳಿ, ಅಹಲ್ಯಾ ಸದಾನಂದ, ಸರೋಜಾ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.