ಭಾಲ್ಕಿ:ಅ.3:ಮಕ್ಕಳು ಗಣಿತ ವಿಷಯದ ವಿವಿಧ ಆಕೃತಿಗಳನ್ನು ನಿರ್ಮಿಸುವ, ತಯಾರಿಸುವ ಮೂಲಕ ಪ್ರಾಯೋಗಿಕ ಕಲಿಕೆಯಲ್ಲಿ ತೊಡಗಿಕೊಂಡರೆ ಗಣಿತ ವಿಷಯವನ್ನು ತುಂಬಾ ಸುಲಭವಾಗಿ ಅರ್ಥೈಸಿಕೊಂಡು ದೀರ್ಘ ಕಾಲದವರೆಗೆ ಕಲಿತ ವಿಷಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಬಹುದು ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ, ಗಣಿತ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕರು ಶಾಲೆಯಲ್ಲಿ ಮೇಲಿಂದ ಮೇಲೆ ವಿಜ್ಞಾನ ವಸ್ತು ಪ್ರದರ್ಶನ, ರಸಪ್ರಶ್ನೆ, ಕವಿಗೋಷ್ಠಿ, ಚರ್ಚಾಸ್ಪರ್ಧೆ, ಗಣಿತ ಮೇಳದಂತಹ ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತು ಕುತೂಹಲ, ಆಸಕ್ತಿ ಮೂಡಿಸಲು ಸಾಧ್ಯವಿದೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ದೇಶದ ಅಮೂಲ್ಯ ರತ್ನಗಳಾಗಿದ್ದರು. ಇವರಿಬ್ಬರೂ ತಮ್ಮ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಹೋರಾಟ, ರಾಷ್ಟ್ರಭಕ್ತಿಯ ಮೂಲಕ ನಮ್ಮ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಿ, ರಾಷ್ಟ್ರವನ್ನು ಪ್ರಗತಿಪಥದತ್ತ ನಡೆಸಿದ್ದರು ಎಂದು ತಿಳಿಸಿದರು.
ವಿದ್ಯಾರ್ಥಿಗಳು ರಂಗೋಲಿ, ಚಾರ್ಟ್, ಮಾಡ್ಯೂಲ್ ಗಳಲ್ಲಿ ಗಣಿತ ವಿಷಯದ ಸೂತ್ರ, ಮೂಲಮಾನ, ಆಕೃತಿ, ಥೇರಂಗಳನ್ನು ರಚಿಸಿ, ವಿವರಿಸಿ ಸಭಿಕರ ಗಮನ ಸೆಳೆದರು.
ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಸಂಸ್ಥಾನ ವಿದ್ಯಾಪೀಠದ ಸಂಯೋಜಕ ಬಾಲಾಜಿ ವಲ್ಲೂರೆ,
ಮುಖ್ಯಶಿಕ್ಷಕರಾದ ಮಹೇಶ ಮಹಾರಾಜ್, ಮಹೇಶ ಕುಲಕರ್ಣಿ, ಬಸವಶ್ರೀ ಮಾಳಗೆ, ಸಂಯೋಜಕ ಪ್ರವೀಣಕುಮಾರ ಖಂಡಾಳೆ, ಹಿರೇಮಠ ಸಂತೋಷ ಪತಂಗೆ, ಸಂತೋಷ ಬಿರಾದರ, ಸಂತೋಷ ಜೋಜನೆ, ಶಿವಾನಂದ ನಾವಲಗಿಮಠ, ಮಲ್ಲಿಕಾರ್ಜುನ, ಕಾಶಿಗಿರಿ, ಲಕ್ಷ್ಮಣ ಮೇತ್ರೆ, ಬಸವರಾಜ ಪ್ರಭಾ ಸೇರಿದಂತೆ ಇತರರು ಇದ್ದರು.