
ಬೀದರ್:ಆ.10: ಗಣಿತ ವಿಷಯ ಎಲ್ಲ ವಿಷಯಗಳಿಗೆ ತಾಯಿ ಇದ್ದ ಹಾಗೆ. ಗಣಿತ ಇಲ್ಲದೇ ಯಾವ ವಿಷಯಗಳು ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದು ವಿಶ್ರಾಂತ ಕುಲಪತಿಗಳು ಹಾಗೂ ಪ್ರೊ.ಬಿ.ಜಿ ಮೂಲಿಮನಿ ಫೌಂಡೆಶನ್ ಸಂಸ್ಥಾಪಕರಾದ ಪ್ರೊ.ಬಿ.ಜಿ ಮೂಲಿಮನಿ ಅಭಿಪ್ರಾಯ ಪಟ್ಟರು.
ಬುಧವಾರ ನಗರದ ಹೊರವಲಯದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗಣಿತ ಪ್ರಯೋಗಾಲಯ ನಿರ್ಮಾಣ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣಿತ ಹಾಗೂ ವಿಜ್ಞಾನ ವಿಷಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಮಕ್ಕಳ ಬುದ್ದಿಮತ್ತೆ ಹೆಚ್ಚಿಸಲು ಸಹಾಯ ಮಾಡುವ ಗಣಿತ ವಿಷಯವು ನೋಬಲ್ ಪಾರಿತೋಷಕದಷ್ಟೇ ಮಹತ್ವತೆ ಪಡೆದಿದೆ. ಶಿಕ್ಷಕರಾದವರು ಮಕ್ಕಳ ಕಲ್ಪನಾ ಸಾಮಥ್ರ್ಯಕ್ಕೆ ಅನುಗುಣವಾಗಿ ಬೋಧನೆ ಮಾಡಬೇಕು. ಬೇರೆ ವಿಷಯಗಳು ಕಾಲ ಕಾಲಕ್ಕೆ ಹಾಗೂ ಸಮಯ, ಸಂದರ್ಭಗಳಲ್ಲಿ ಬದಲಾದರೆ ಗಣಿತ ಮಾತ್ರ ಬದಲಾಗದ ವಿಷಯವಾಗಿದೆ. ವಿದ್ಯಾರ್ಥಿಗಳಲ್ಲಿ ಗಣಿತ ಅಧ್ಯಯನ ಮಾಡುವ ಉತ್ಸಾಹ ತೋರಿದರೆ ಉಳಿದ ವಿಷಯಗಳು ಪರಿಪೂರ್ಣವಾಗಿ ಅಧ್ಯಯನ ಮಾಡುವ ಮನಸ್ಸು ಮಾಡಬಹುದು. ಆದ್ದರಿಂದ ಶಿಕ್ಷಕರು ಮೊದಲು ಗಣಿತ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕೆಂದು ಪ್ರೊ.ಮೂಲಿಮನಿ ಕರೆ ನೀಡಿದರು.
ಕಾರ್ಯಾಗಾರ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಮಾತನಾಡಿ, ಗಣಿತ ಕಬ್ಬಿಣದ ಕಡಲೆ ಎಂಬುದಿಲ್ಲ. ಇದು ಸರಳವಾಗಲು ನಿರಂತರ ಅಧ್ಯಯನ ಅಗತ್ಯ. ಗಣಿತ ಎಂದರೆ ಗುಣ, ನೀತಿ ಹಾಗೂ ತತ್ವವನ್ನು ಅಳವಡಿಸುವುದು ಎಂದರ್ಥ. ವಿದ್ಯಾರ್ಥಿಗಳು ಗಣಿತವನ್ನು ಕರಗತ ಮಾಡಿಕೊಳ್ಳುವ ವರೆಗೆ ಶಿಕ್ಷಕರು ಪ್ರೋತ್ಸಾಹಿಸಬೇಕೆಂದರು.
ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ವಿಜ್ಞಾನ ಪ್ರಯೋಗಾಲಯದಂತೆ ಗಣಿತ ವಿಷಯಕ್ಕೆ ಪ್ರತ್ಯೇಕ ಪ್ರಯೋಗಾಲಯ ಅಗತ್ಯವಿದೆ ಎಂಬುದನ್ನು ಮನಗಂಡು ನಾವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 150 ಗಣಿತ ಪ್ರಯೋಗಾಲಯಕ್ಕೆ ಶಿಫಾರಸ್ಸು ಮಾಡಿದೇವು. ಅದರಲ್ಲಿ ಆಗಿನ ಕೆ.ಕೆ.ಆರ್.ಡಿ.ಬಿ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ವಾರ್ ಅವರು 82 ಪ್ರಯೋಗಾಲಯಗಳಿಗೆ ಮಂಜುರಾತಿ ನೀಡಿದ್ದರು. ಆದರೆ ಆ ಪ್ರಸ್ತಾವನೆ ಮುಖ್ಯಮಂತ್ರಿಗಳ ಬಳಿಯೇ ಉಳಿದುಕೊಂಡಿದೆ. ಹಣ ಬಿಡುಗಡೆ ಆದರೆ ಈ ಭಾಗದ ಗಣಿತ ಪ್ರಯೋಗಾಲಯದ ಕನಸ್ಸು ಸಾಕಾರವಾಗಲಿದೆ ಎಂದರು.
ಸಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಶಿಕಾಂತ ಜೋಷಿ ಹಾಗೂ ಸಂತಪುರ ನೇತಾಜಿ ಸುಭಾಷಚಂದ್ರ ಬೋಸ್ ಪ್ರೌಢಶಾಲೆಯ ಮುಖ್ಯ ಗುರು ಮನೋಹರ ಬಿರಾದಾರ ಗಣಿತ ಶಿಕ್ಷಕರಿಗೆ ತರಬೇತಿ ನೀಡಿದರು.
ಪ್ರೊ. ಬಿ.ಜಿ ಮೂಲಿಮನಿ ಫೌಂಡೆಶನ್ ಅಧ್ಯಕ್ಷ ಶಿವಲಿಂಗಪ್ಪ ಜಲಾದೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಜಪ್ಪ ಮಾಣುರೆ, ಸಚಿದಾನಂದ ಹಾಗೂ ಅಗಸ್ತ್ಯ ಫೌಂಡೇಶನ್‍ನ ಬಾಬುರಾವ ಹಾಗೂ ಇತರರು ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಸಮಗ್ರ ಶಿಕ್ಷಣ ವಿಭಾಗದ ಎ.ಪಿ.ಸಿ ನೋಡಲ ಅಧಿಕಾರಿ ಹುಡಗೆ ಗುಂಡಪ್ಪ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಸಾಯಿನಾಥ ನಿಟ್ಟೂರಕರ್ ಸ್ವಾಗತಿಸಿ, ಅಜಯ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಶಿವಮಂಗಲಾ ವಂದಿಸಿದರು. ಬೀದರ್ ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಗಣಿತ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೀದರ್, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ, ಪ್ರೊ.ಬಿ.ಜಿ ಮೂಲಿಮನಿ ಫೌಂಡೇಶನ್‍ಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.