ಗಣಿತ ಅಧ್ಯಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕ

ಕಲಬುರಗಿ: ಡಿ.23:ಗಣಿತ ಒಳಗೊಂಡಿರುವ ಲೆಕ್ಕಾಚಾರಗಳನ್ನು ಮಾಡುವುದರಿಂದ ತಾರ್ಕಿಕ ಶಕ್ತಿ, ಆಲೋಚನಾ ಸಾಮಥ್ರ್ಯ, ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದೊಂದು ಕೇವಲ ವಿಷಯವಾಗಿರದೆ, ಜೀವನದ ಅಂಗವಾಗಿದೆ. ಲೆಕ್ಕಾಚಾರವಿಲ್ಲದ ಬದುಕು ಪರಿಪೂರ್ಣವಾಗಲಾರದು. ಗಣಿತದ ಅಧ್ಯಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯಮಾಡುತ್ತದೆ ಎಂದು ಗಣಿತ ಶಿಕ್ಷಕ ಶಿವಕುಮಾರ ಮುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್‍ರ ಜನ್ಮದಿನವಾದ ‘ರಾಷ್ಟ್ರೀಯ ಗಣಿತ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಸಿ ಅವರು ಮಾತನಾಡುತ್ತಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಗಣಿತ ಜಗತ್ತಿಗೆ ಅನೇಕ ಸಿದ್ದಾಂತಗಳು, ಕಲ್ಪನೆಗಳು, ಸೂತ್ರಗಳನ್ನು ನೀಡುವ ಮೂಲಕ ರಾಮಾನುಜನ್ ಅವರು ಗಣಿತಶಾಸ್ತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರು ನೀಡಿರುವ ಕೊಡುಗೆ ತುಂಬಾ ಅವಿಸ್ಮರಣೀಯವಾಗಿದೆ. ಭಾರತವು ವಿಶ್ವಕ್ಕೆ ‘ಸೊನ್ನೆ’ಯನ್ನು ಕೊಡುಗೆಯನ್ನಾಗಿ ನೀಡುವ ಮೂಲಕ, ಗಣಿತಶಾಸ್ತ್ರ ಕೇತ್ರವನ್ನು ‘ಪರಿಪೂರ್ಣ’ವನ್ನಾಗಿಸಿದೆ. ಗಣಿತ ಶಾಸ್ತ್ರ ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕವಾಗಿದೆ. ಇದು ಕಬ್ಬಿಣದ ಕಡಲೆಯಲ್ಲ. ತುಂಬಾ ಆಸಕ್ತಿಯಿಂದ ಅಧ್ಯಯನ ಮಾಡಿದರೆ ಸರಳವಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಮೂಡಿರುವ ಭಯವನ್ನು ಶಿಕ್ಷಕರು ಮತ್ತು ಪಾಲಕರು ಹೋಗಲಾಡಿಸಬೇಕಾದದ್ದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಗಣಿತದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಶಿವಯೋಗೆಪ್ಪಾ ಬಿರಾದಾರ, ಶಿಕ್ಷಕರಾದ ಶ್ವೇತಾ ಮುತ್ತಾ, ಲಕ್ಷ್ಮೀ ಇಂಡಿ, ಪ್ರಿಯಾಂಕಾ ವಾಲಿ, ಪ್ರಮೋದ ಕುಲಕರ್ಣಿ, ವಿಶ್ವನಾಥ ನಂದರ್ಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.