
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.12: ತಾಲ್ಲೂಕಿನ ಹಳೇಕೋಟೆ ಗ್ರಾಮದ ಮರಿಸ್ವಾಮಿ ಮಠದ ನೈಸರ್ಗಿಕ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಮರಿಸ್ವಾಮಿ ಮಠದ ಕೆರೆಯು 2019-20ನೇ ಸಾಲಿನಲ್ಲಿ ಅಂದಾಜು ರೂ 30ಲಕ್ಷ ವೆಚ್ಚದಲ್ಲಿ ಕೆರೆಯ ಸುತ್ತ ಕಬ್ಬಿಣದ ಜಾಲಿ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗಿದೆ.
ಗ್ರಾಮದಲ್ಲಿ ಸುತ್ತ ಬೆಟ್ಟಗಳಿಂದ ಆವೃತವಾಗಿರುವ ಕೆರೆಯು ಮಳೆಗಾಲದಲ್ಲಿ ಸಹಜವಾಗಿ ತುಂಬುತ್ತದೆ. ಕೆರೆಯ ಮೀನುಗಳನ್ನು ಯಾರೂ ಹಿಡಿಯುವುದಿಲ್ಲ ಆದ್ದರಿಂದ ಸಹಜವಾಗಿ 40 ರಿಂದ 50 ಸಾವಿರ ಮೀನು ಕೆರೆಯಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ಜುಲೈ 31 ರಂದು ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸ್ಪೋಟದಿಂದಾಗಿ ಕೆರೆ ಮೇಲೆಲ್ಲಾ ಬಿಳಿಯ ಬೂದಿ ಹರಡಿಕೊಂಡಿತ್ತು. ಕೆಲದಿನಗಳ ನಂತರ ಮೀನು ಸಾಯಲು ಪ್ರಾರಂಭಿಸಿದವು. ಈಗ ನೋಡಿದರೆ ಸಾವಿರಾರು ಸಂಖ್ಯೆಯಲ್ಲಿ ಸತ್ತಿವೆ. ಇದಕ್ಕೆಲ್ಲಾ ಸ್ಪೋಟವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು.
ಕೆರೆಯಲ್ಲಿ ಸತ್ತಿರುವ ಮೀನುಗಳನ್ನು ನಾಯಿ, ಕಾಡುಪ್ರಾಣಿ ಮತ್ತು ಪಕ್ಷಿಗಳು ತೆಗೆದುಕೊಂಡು ಹೋಗುತ್ತಿರುವುದರಿಂದ ಅವುಗಳಿಗೂ ಅಪಾಯ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಈ ಕುರಿತಂತೆ ಮಾತನಾಡಿದ ಮರಿಸ್ವಾಮಿ ಮಠದ ಮಲ್ಲಿಕಾರ್ಜುನ ಶಿವಾಚಾಯ೯ ಸ್ವಾಮಿಜಿ, ಮಠಕ್ಕೆ ಅಂಟಿಕೊಂಡಿರುವ ಬೆಟ್ಟಗಳಲ್ಲಿ ಇತ್ತೀಚೆಗೆ ನಡೆದ ಭಾರಿ ಪ್ರಮಾಣದ ರಾಸಾಯನಿಕ ಸ್ಪೋಟದಿಂದ ಮೀನುಗಳು ಸತ್ತಿರುವ ಶಂಕೆ ಇದ್ದು, ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.