ಗಣಿಗಾರಿಕೆ ಕಂಪನಿಗಳಿಂದ ಹಾನಿ ರೈತರ ಆಕ್ರೋಶ

ಚಿತ್ರದುರ್ಗ, ಮಾ.೧೫: ಭೀಮಸಮುದ್ರ ಗ್ರಾಮದಲ್ಲಿ ಗಣಿಗಾರಿಕೆ ಕಂಪನಿಗಳು ಸರ್ಕಾರಕ್ಕೆ ಸಂಬಂಧಿಸಿದ ಕಾಗೇ ಹಳ್ಳದ ಪಥ ಬದಲಿಸಿರುವ ಪರಿಣಾಮ ನೂರಾರು ರೈತರ ತೋಟಗಳು ಒಣಗಿದ್ದು, ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಮಾರಣಾಂತಿಕ ಖಾಯಲೆಗಳಿಂದ ಜನರು ನರಳುತ್ತಿದ್ದಾರೆ ಎಂದು ಭೀಮಸಮುದ್ರ ಗಣಿಭಾದಿತ ರೈತ ಎಸ್.ವಿರೇಶ್ ಆರೋಪಿಸಿದ್ದಾರೆ.ನಗರದಲ್ಲಿ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆ ಕಂಪನಿಗಳು ಅಕ್ರಮ ಗಣಿ ಚಟುವಟಿಕೆ ನಡೆಸುವ ಉದ್ದೇಶದಿಂದ ಹಾಗೂ ಅದಿರು ಲಾರಿಗಳ ಸಂಚಾರಕ್ಕಾಗಿ ದಿಂಡದ ಹಳ್ಳಿ ಗ್ರಾಮದ ಕಾಗೇ ಹಳ್ಳವನ್ನು ಬೇರೆಡೆ ಪಥ ಬದಲಿಸಿ, ಸರ್ಕಾರಕ್ಕೂ ವಂಚನೆ ಮಾಡಿದ್ದಾರೆ ಎಂದು ದೂರಿದರು.
ಹಿಂದೆ ಈ ಪ್ರದೇದಶದಲ್ಲಿ ಹಳ್ಳ ಇದ್ದಿದ್ದರಿಂದ ಕೇವಲ ೧೫೦ ಅಡಿಗೆ ಕೊಳವೆ ಬಾವಿಗೆ ನೀರು ಸಿಗುತ್ತಿತ್ತು. ಪ್ರಸ್ತುತ ೧೦೦೦ ಅಡಿ ಕೊರೆಸಿದರು ನೀರು ದೊರೆಯುತ್ತಿಲ್ಲ. ಇದರಿಂದ ತೆಂಗು, ಅಡಿಕೆ, ಬಾಳೆ ತೋಟಗಳು ಒಣಗಿ ಹೋಗುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಭೀಮಸಮುದ್ರದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗಳ ಕುರಿತು ೨೦೦೮ ರಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಪರಿಶೀಲಿಸಿ, ಪಥ ಬದಲಿಸಲಾಗಿದೆ ಎಂದು ವರದಿಯನ್ನು ನೀಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಏರಿದ್ದು, ವಿಚಾರಣೆ ಹಂತದಲ್ಲಿದೆ ಎಂದರು.
ಅಕ್ರಮ ಗಣಿಗಾರಿಕೆ ಸಂಬಂಧ ಈಗಾಗಲೇ ಸಂಬಂಧಿಸಿದ ಕಚೇರಿಗೆ ದೂರು ನೀಡಿದ್ದೆನೆ. ರೈತರ ತೋಟಗಳಿಗೆ ರಕ್ಷಣೆ ಇಲ್ಲದಾಗಿದೆ. ಆದ್ದರಿಂದ ೨೦೨೧ ರಲ್ಲಿ ಉಚ್ವ ನ್ಯಾಯಾಲಯ ಅಕ್ರಮ ಗಣಿಗಾರಿಕೆಗೆ ತಡೆಯಾಜ್ಞೆ ಆದೇಶ ಹೊರಡಿಸಿದ್ದು, ಪ್ರತಿಯನ್ನು ತಾಲ್ಲೂಕು ಕಚೇರಿಗೆ ತಲುಪಿಸಲಾಗಿದೆ. ಆದರೂ ಕೂಡ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ಗಂಭಿರ ಆರೋಪ ಮಾಡಿದರು.
ಡಾ.ವಿಜಯಕುಮಾರ್ ಮಾತನಾಡಿ, ಭೀಮಸಮುದ್ರ ಸುತ್ತಮುತ್ತಲಿನ ಸಾಕಷ್ಟು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತಿರುವುದರಿಂದ ಸಾಕಷ್ಟು ದೂಳು ನಿರ್ಮಾಣವಾಗಿದೆ ಇದರಿಂದಾಗಿ ಈ ಭಾಗದ ಜನರಲ್ಲಿ ಸಾಕಷ್ಟು ಮಾರಣಾಂತಿಕ ಖಾಯಿಲೆಗಳು ತುಂಬಿಕೊಳ್ಳುತ್ತಿವೆ ಎಂದು ಹೇಳಿದ ಅವರು, ಗಣಿ ಸಂಬಂಧಿತ ಚಟುವಟಿಕೆ ನಿರ್ಭಂಧಿಸಲು ನಾಲೆಯ ದಿಂಡದ ಹಳ್ಳಿ ಗ್ರಾಮದ ಬಳಿ ನಾಳೆ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.